ದೇಶದ ಬೃಹತ್ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲಿ 5 ಚದರ ಕಿ.ಮೀ. ಅರಣ್ಯ ಹೊದಿಕೆ ಕಡಿಮೆಯಾಗಿದೆ. ಹೀಗಂತ ನಾವೂ ಹೇಳ್ತಿಲ್ಲ. ಭಾರತದ ಅರಣ್ಯ ವರದಿ- 2021ರ ಸಮೀಕ್ಷೆ
ಯಿಂದ ಬಹಿರಂಗವಾಗಿದೆ.
ಅಂದಹಾಗೆ ಕೇಂದ್ರ ಸರ್ಕಾರ ದ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಸಚಿವಾಲಯದಡಿ ಭಾರತೀಯ ಅರಣ್ಯ ಸಮೀಕ್ಷೆ ಸಿದ್ಧಪಡಿಸಿದ ಭಾರತೀಯ ಅರಣ್ಯ ವರದಿ-2021ರಲ್ಲಿ ದೇಶದ 7 ಬೃಹತ್ ನಗರಗಳ ಹಸಿರು ಹೊದಿಕೆಯ ಪ್ರಮಾಣ ಸರ್ವೇ ಮಾಡಲಾಗಿದೆ. ಇದರಲ್ಲಿ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬಯಿ ನಗರಗಳಲ್ಲಿ 2011ರಿಂದ 2021ರ ವರೆಗೆ ಅರಣ್ಯ ಹೊದಿಕೆಯ ಬೆಳವಣಿಗೆ ಬಗ್ಗೆ ಮಾಹಿತಿ ಕಲೆಹಾಕಿದೆ.
ಇದರಲ್ಲಿ ಬೆಂಗಳೂರಿನಲ್ಲಿ 4.98 ಚದರ ಕಿ.ಮೀ. ಅರಣ್ಯ ಹೊದಿಕೆ ಕಡಿಮೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಅಹಮದಾಬಾದ್‌ನಲ್ಲಿ 8.55 ಚದರ ಕಿ.ಮೀ., ಕೋಲ್ಕತ್ತಾದಲ್ಲಿ 0.75 ಚ.ಕಿ.ಮೀ. ಅರಣ್ಯ ಹೊದಿಕೆ ನಷ್ಟವಾಗಿದೆ.
ಇನ್ನು, ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ 2ನೇ ನಗರವಾದ ಹೈದರಾಬಾದ್‌ನಲ್ಲಿ ಕಳೆದ 10 ವರ್ಷಗಳಲ್ಲಿ 48.66 ಚದರ ಕಿ.ಮೀ. ಅರಣ್ಯ ಹೊದಿಕೆ ಪ್ರಮಾಣ ಹೆಚ್ಚಳವಾಗಿದೆ. ಅಭಿವೃದ್ಧಿ ಜತೆಗೆ ಗಿಡ ಬೆಳೆಸುವುದಕ್ಕೂ ಆದ್ಯತೆ ನೀಡಿರುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧ್ಯವಾಗಿದೆ.
ಮತ್ತೊಂದೆಡೆ, ಅತ್ಯಧಿಕ ವಾಯುಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿರುವ ನಗರ ದೆಹಲಿಯಲ್ಲಿಯೂ 19.19 ಚ.ಕಿ.ಮೀ. ಹಸಿರು ಹೊದಿಕೆ ಹೆಚ್ಚಳವಾಗಿದೆ. ಮುಂಬಯಿನಲ್ಲಿ 9 ಚ.ಕಿ.ಮೀ. ಮತ್ತು ಚೆನ್ನೈನಲ್ಲಿ 4.68 ಚ.ಕಿ.ಮೀ. ಅರಣ್ಯ ಹೊದಿಕೆ ವಿಸ್ತರಣೆಯಾಗಿದೆ.
ಪ್ರಸ್ತುತ ದೇಶದ ಪ್ರಮುಖ 7 ನಗರಗಳ ಅರಣ್ಯ ವ್ಯಾಪ್ತಿಯ ವ್ಯಾಪ್ತಿಯು 509.72 ಚದರ ಕಿ.ಮೀ. (ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ.10.21) ಹರಡಿಕೊಂಡಿದೆ. ಇದರಲ್ಲಿ ದೆಹಲಿ ಅತಿ ಹೆಚ್ಚು 194.24 ಚದರ ಕಿ.ಮೀ. ಅರಣ್ಯ ಹೊಂದಿದೆ. ನಂತರದ ಸ್ಥಾನ ಮುಂಬಯಿ 110.77 ಚದರ ಕಿ.ಮೀ. ಹಾಗೂ ಬೆಂಗಳೂರು 89.02 ಚದರ ಕಿ.ಮೀ. ಹೊಂದಿದೆ. ಆದರೆ, ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲಿ ಒಟ್ಟಾರೆ ನಗರ ವಿಸ್ತೀರ್ಣದ ಶೇ.7.19 ರಷ್ಟು ಇದ್ದ ಅರಣ್ಯ ಪ್ರದೇಶ 2021ರಲ್ಲಿ ಶೇ.6.81ಕ್ಕೆ ಇಳಿಕೆಯಾಗಿದೆ.
PublicNext
17/06/2022 06:43 pm