ಬೆಂಗಳೂರು: ವಿವಿಐಪಿ ಮೂಮೆಂಟ್ ಇದ್ದಾಗ ರಸ್ತೆ ಬದಲಿಸುವಂತೆ ಸಂಚಾರ ಪೊಲೀಸ್ರು ಮನವಿ ಮಾಡೋದು ಸಾಮಾನ್ಯ. ಆದ್ರೆ ಸದ್ಯ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಇದ್ರಿಂದ ವಾಹನ ಸವಾರರು ಹೈರಾಣಾಗ್ತಿದ್ದಾರೆ.
ಈ ಹಿನ್ನೆಲೆ ಟ್ರಾಫಿಕ್ ಪೊಲೀಸರು ಈ ಮಾರ್ಗಗಳಲ್ಲಿ ವಾಹನ ಚಲಾಯಿಸಬೇಡಿ. ಬದಲಾಗಿ ಪರ್ಯಾಯ ಮಾರ್ಗದಲ್ಲಿ ಸಂಚಾರ ನಡೆಸಿ ಎಂದು ಮನವಿ ಮಾಡುತ್ತಿದ್ದಾರೆ. ರಸ್ತೆ ತುಂಬಾ ನೀರು ತುಂಬಿದ್ದು, ಕಳೆದೊಂದು ವಾರದಿಂದ ಐಟಿ ಸಿಟಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ರಾಜಧಾನಿ ಥಂಡಾ ಹೊಡೆದಿದೆ.
ಮಹಾಮಳೆಗೆ ನಗರದ ಪ್ರಮುಖ ರಸ್ತೆಗಳೆಲ್ಲ ಜಲಾವೃತಾಗಿದ್ದು, ಒಳಚರಂಡಿ ಹಾಗೂ ರಾಜಕಾಲುವೆ ತುಂಬಿ ಹರಿಯುತ್ತಿವೆ. ಐಟಿ-ಬಿಟಿ ಕಂಪೆನಿಗಳಿರುವ ಮಾರತ್ ಹಳ್ಳಿ, ಬೆಳ್ಳಂದೂರು ಸುತ್ತಮುತ್ತ ಮಳೆ ನೀರು ತುಂಬಿ ರಸ್ತೆಯಲ್ಲಿ ನಿಂತು ನೀರಿದೆ. ಹೀಗಾಗಿ ಸಾರ್ವಜನಿಕ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದ್ದು, ಮುಂಜಾಗ್ರತ ಕ್ರಮವಾಗಿ ಮಡಿವಾಳ ಸಂಚಾರಿ ಪೊಲೀಸರು ಮೈಕ್ ಹಿಡಿದು ರಸ್ತೆಗಿಳಿದು ಈ ಭಾಗದ ರಸ್ತೆಗಳಿಗೆ ತೆರಳಬೇಡಿ ಎಂದು ವಾಹನ ಸವಾರರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕೆ.ಆರ್.ಪುರಂ,ಮಾರತ್ ಹಳ್ಳಿ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಲ್ಲಿ ಸಂಚಾರಿಸಬೇಡಿ. ಯಾಕೆಂದರೆ ಬೆಳ್ಳಂದೂರಿನ ಇಕೋಸ್ಟೇಸ್ ಬಳಿ ಮಳೆ ನೀರು ತುಂಬಿ ಸರಾಗವಾಗಿ ಹರಿಯಲು ಜಾಗವಿಲ್ಲದೆ ಜಲಾವೃತ್ತಗೊಂಡಿದೆ. ಸುಗಮವಾಗಿ ಸಂಚಾರಿಸಲು ಸಾಧ್ಯವಿಲ್ಲ.
ಹೀಗಾಗಿ ಮಾರತ್ ಹಳ್ಳಿ, ವರ್ತೂರು, ಮಹದೇವಪುರ ಕಡೆ ಹೋಗುವ ವಾಹನ ಸವಾರರು ಮಡಿವಾಳ, ಸೋನಿ ಸಿಗ್ನಲ್, ಕೋರಮಂಗಲ ಹಾಗೂ ದೊಮ್ಮಲೂರು ಮೂಲಕ ತೆರಳುವಂತೆ ಟ್ರಾಫಿಕ್ ಪೊಲೀಸರು ಮೈಕ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
PublicNext
06/09/2022 04:08 pm