ವರದಿ - ಗಣೇಶ್ ಹೆಗಡೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ತಲಾ 10 ಸಾವಿರ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಷಾರ್ ಗಿರಿನಾಥ್ ಕಳೆದ ಎರಡು ದಿನಗಳಿಂದ ಹೆಚ್ಚು ಮಳೆಯಾಗುತ್ತಿದೆ. ಬೆಂಗಳೂರು ಪೂರ್ವ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ. ಅದರಲ್ಲೂ ಹೆಬ್ಬಾಳ, ಕೆಆರ್ ಪುರಂ ಭಾಗದಲ್ಲಿ ಹಾಗೂ ಹೆಚ್ ಎಸ್ ಆರ್ ಲೇಔಟ್ ಭಾಗದಲ್ಲಿ ಹೆಚ್ಚು ಮಳೆಯಾಗಿದೆ ಎಂದರು.
ಆಗಸ್ಟ್ 5ರವರೆಗೂ ನಗರದಲ್ಲಿ ಹೆಚ್ಚಿನ ಮಳೆ ಇದ್ದು, ಸಾಯಿ ಲೇಔಟ್ ಮನೆ, ಪೈ ಲೇಔಟ್, ನಾಗಪ್ಪರೆಡ್ಡಿ ಲೇಔಟ್ ಮನೆಗಳಲ್ಲಿ ಮಳೆ ನೀರು ತುಂಬಿದೆ. ಆ ಭಾಗದಲ್ಲಿ ಪಂಪಿಂಗ್ ಮಾಡುವ ಮೂಲಕ ನೀರು ತೆಗೆದು ಹಾಕುವ ಕೆಲಸ ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಕಾಮಗಾರಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇನ್ನು ಮುಂದಿನ ಮಳೆಗಾಲಕ್ಕೆ ಯಾವುದೇ ಪ್ರವಾಹ ಆಗದ ಹಾಗೆ ನೋಡಿಕೊಳ್ಳಲಾಗುತ್ತದೆ. ಕಳೆದ ಐದು ತಿಂಗಳಲ್ಲಿ ನಾಲ್ಕನೇ ಬಾರಿ ಮಳೆ ಪರಿಹಾರ ನೀಡಲಾಗುತ್ತಿದೆ. ಬಿಬಿಎಂಪಿಯಿಂದ 10 ಸಾವಿರ ರೂಪಾಯಿ ಪರಿಹಾರ ನಿಗಧಿ ಮಾಡಲಾಗಿದೆ ಎಂದು ಹೇಳಿದರು. ಹಾಗೇ ಮಂಕಿಪಾಕ್ಸ್ ಸೋಂಕಿನ ಸಂಬಂಧ ಹೊರ ರಾಜ್ಯದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಗಳಲ್ಲಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
PublicNext
03/08/2022 05:39 pm