ಬೆಂಗಳೂರು: ಬಿಬಿಎಂಪಿ ಇತಿಹಾಸದಲ್ಲಿ ಕೇವಲ ಎರಡು ತಿಂಗಳಲ್ಲಿ ಬರೋಬ್ಬರಿ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಸಂಗ್ರಹ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.
ಆರ್ಥಿಕ ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5 ರಷ್ಟು ರಿಯಾಯಿತಿ ನೀಡಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮತ್ತೊಂದು ತಿಂಗಳು ಅಂದರೆ ಮೇ ಅಂತ್ಯದವರೆಗೆ ಶೇ.5 ರಷ್ಟು ರಿಯಾಯಿತಿ ವಿಸ್ತರಿಸಲಾಗಿದೆ. ಸರ್ಕಾರ ಮತ್ತು ಬಿಬಿಎಂಪಿ ನೀಡಿದ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡಿರುವ ಬೆಂಗಳೂರಿನ ಆಸ್ತಿ ಮಾಲೀಕರು ಪಾಲಿಕೆಗೆ 2022-23ನೇ ಸಾಲಿನ ವಾರ್ಷಿಕ ಆಸ್ತಿ ತೆರಿಗೆ ಪಾವತಿಸಿದ್ದಾರೆ.
ಪ್ರಸಕ್ತ 2022-23ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 3,475 ಕೋಟಿ ರೂ. ಆದಾಯ ಸಂಗ್ರಹ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ. ಮೊದಲ ಎರಡು ತಿಂಗಳಲ್ಲಿ 2 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಮೂಲಕ ಸದರಿ ವರ್ಷದ ಗುರಿಯ ಶೇ.57.81 ರಷ್ಟು ಆಸ್ತಿ ತೆರಿಗೆ ಸಂಗ್ರಹ ಮಾಡಿದಂತಾಗಿದೆ. ಉಳಿದ ಶೇ 42.19ರಷ್ಟು ಆಸ್ತಿ ತೆರಿಗೆಯನ್ನು ಮುಂದಿನ 10 ತಿಂಗಳಲ್ಲಿ ಸಂಗ್ರಹಿಸಬೇಕಿದೆ.
ಇನ್ನು ವರ್ಷದಿಂದ ವರ್ಷಕ್ಕೆ ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 1,073.11 ಕೋಟಿ ರೂ. ಆಸ್ತಿ ತೆರಿಗೆ ಆನ್‌ಲೈನ್ ಮೂಲಕ ಪಾವತಿ ಆಗಿದೆ. ಉಳಿದ 937.46 ಕೋಟಿ ರು, ಮಾತ್ರ ನಗದು ಸೇರಿದಂತೆ ಒಟ್ಟು 2009.75 ಕೋಟಿ ರೂ. ಪಾವತಿ ಆಗಿದೆ.
ಆರ್ಥಿಕ ವರ್ಷದ ಆರಂಭದ ತಿಂಗಳಾದ ಏಪ್ರಿಲ್ ಅಂತ್ಯಕ್ಕೆ 1,455 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಮೇ ತಿಂಗಳಿನಲ್ಲಿ ಬರೋಬ್ಬರಿ 545 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಹಿಂದಿನ ವರ್ಷದಲ್ಲಿ ಶೇ 5ರಷ್ಟು ರಿಯಾಯಿತಿ ನೀಡಿದರೂ ಈ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗಿರಲಿಲ್ಲ ಎಂದು ಕಂದಾಯ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ 2020-21ನೇ ಸಾಲಿನ ಮೇ ಅಂತ್ಯಕ್ಕೆ 1456.01 ಕೋಟಿ ರೂ. ಹಾಗೂ 2021-22ನೇ ಸಾಲಿನ ಮೇ ಅಂತ್ಯಕ್ಕೆ 1362.25 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ 600ರಿಂದ 700 ಕೋಟಿ ರೂ. ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹವಾಗಿದೆ.
ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಮೇ 31ಕ್ಕೆ)
ವಲಯ ಆಸ್ತಿ ತೆರಿಗೆ (ಕೋಟಿ ರೂ.ಗಳಲ್ಲಿ)
ಪೂರ್ವ 376.64
ಪಶ್ಚಿಮ 231.42
ದಕ್ಷಿಣ 323.79
ಮಹದೇವಪುರ 549.04
ಆರ್‌ಆರ್‌ನಗರ 136.15
ಯಲಹಂಕ 127.04
ದಾಸರಹಳ್ಳಿ 65.16
ಬೊಮ್ಮನಹಳ್ಳಿ 197.3
ಒಟ್ಟು 2009.57
ಸ್ಲಗ್: ದಾಖಲೆ ಸೃಷ್ಟಿಸಿದ ಬಿಬಿಎಂಪಿ
PublicNext
02/06/2022 08:23 pm