ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಗುತ್ತಿಗೆಯನ್ನು ಇಸ್ಕಾನ್ ಸಂಸ್ಥೆಗೆ ವಹಿಸುವಂತೆ ಇನ್ನೆರಡು ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿರಾ ಕ್ಯಾಂಟೀನ್ ಸಾಮಾಜಿಕ ಕಳಕಳಿಯ ಯೋಜನೆ.ಹೀಗಾಗಿ ಜನರಿಗೆ ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಸ್ಕಾನ್ ಸಂಸ್ಥೆಯು ಅಕ್ಷಯಪಾತ್ರೆ, ಅಕ್ಷಯ ನಿಧಿ ಸೇರಿ 3 ಸಂಸ್ಥೆಗಳಿಂದ ವಿವಿಧೆಡೆ ಆಹಾರ ಪೂರೈಸುತ್ತಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ಗಳಿಗೂ ಆಹಾರ ಪೂರೈಸಲು ಗುತ್ತಿಗೆ ನೀಡುವಂತೆ ಪ್ರಸ್ತಾವನೆ ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗುವುದು ಎಂದು ಹೇಳಿದರು.
ಇಸ್ಕಾನ್ ಊಟದಲ್ಲಿ ಬೆಳ್ಳುಳ್ಳಿ ಹಾಕುವುದಿಲ್ಲ ಎಂಬ ಮಾತಿದೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ ಇಸ್ಕಾನ್‌ಗೆ ಯಾವುದೇ ಸೂಚನೆ ನೀಡುವುದಿಲ್ಲ. ಆದರೆ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದಂತೆ ಪೂರೈಸಲು ಸೂಚಿಸಲಾಗುವುದು ಎಂದರು.
ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುತ್ತಿದ್ದ ಶೆಫ್‌ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಗೆ ಹಲವು ವರ್ಷಗಳಿಂದ ಬಿಲ್ ಬಾಕಿ ಉಳಿಸಿಕೊಳ್ಳಲಾಗಿತ್ತು. ಕಳೆದ ಮೇ 20ರ ಒಳಗಿನ ಎಲ್ಲ ಬಾಕಿ ಬಿಲ್ ಗಳನ್ನು ಪಾವತಿಸಲಾಗಿದೆ. ನಿತ್ಯ ಊಟ ಸರಬರಾಜು ಮಾಡುತ್ತಿದ್ದ ಮಾಹಿತಿಯನ್ನು ಪಾಲಿಕೆಯ ಮಾರ್ಷಲ್‌ಗಳು ವರದಿ ನೀಡಿದ್ದಾರೆ. ಈ ಆಧಾರದಲ್ಲಿ ಗುತ್ತಿಗೆ ಸಂಸ್ಥೆಗಳಿಗೆ ಬಿಲ್ ಪಾವತಿಸಲಾಗಿದೆ. ಕೆಲವೆಡೆ ಗುತ್ತಿಗೆ ಸಂಸ್ಥೆಗಳು ನೀಡಿದ ಊಟ ಸರಬರಾಜು ಲೆಕ್ಕ ಮತ್ತು ಮಾರ್ಷಲ್‌ಗಳು ನೀಡಿದ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅದನ್ನು ಪರಿಶೀಲಿಸಿ ಬಿಲ್ ಪಾವತಿ ಮಾಡುವುದಾಗಿ ಆದೇಶಿಸಲಾಗಿದೆ ಎಂದು ಚೀಫ್ ಕಮಿಷನರ್ ತಿಳಿಸಿದರು.
Kshetra Samachara
01/06/2022 06:04 pm