ಬೆಂಗಳೂರು:ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ (ಎಫ್‌ಆರ್‌ಬಿಎಂ) 2021ರ ಅನ್ವಯ ಆದಾಯ ಮತ್ತು ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ 9 ಸಾವಿರ ಕೋಟಿ ರೂ ಮೀರದಂತೆ 2022-23ನೇ ಸಾಲಿನ ಬಜೆಟ್ ಮಂಡನೆಗೆ ಪಾಲಿಕೆ ಸಿದ್ದತೆ ಮಾಡಿಕೊಂಡಿದೆ. ಈ ಮೂಲಕ ಆರ್ಥಿಕ ಶಿಸ್ತು ತರಲು ನಿರ್ಧರಿಸಿದ್ದಾಗಿ ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ಆರ್ಥಿಕ ಸಾಲಿನಲ್ಲಿ 9,500 ಕೋಟಿ ರೂ. ಮೀರಿದ ಆಯವ್ಯಯ ಮಂಡನೆ ಮಾಡಲಾಗಿತ್ತು. ಆದರೆ, ಈ ವರ್ಷ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಜಾರಿಯಾಗಿದ್ದರಿಂದ, ಆದಾಯದ ಮೂಲ ಇಲ್ಲದಿದ್ದರೂ ಕೊರತೆ ಇಟ್ಟುಕೊಂಡು ಬಜೆಟ್ ಮಂಡಿಸುವ ಮೂಲಕ ವೆಚ್ಚ ತೋರಿಸುವುದಕ್ಕೆ ಕಡಿವಾಣ ಹಾಕಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಹಾಗೂ ಪಾಲಿಕೆಗೆ ಎಲ್ಲ ಮೂಲಗಳಿಂದ ಬರುವ ಆದಾಯವನ್ನು ಪರಿಗಣಿಸಿದರೂ 10 ಸಾವಿರ ಕೋಟಿ ರೂ ಆದಾಯ ಮೂಲ ತೋರಿಸಲಾಗುತ್ತಿಲ್ಲ. ಹೀಗಾಗಿ, ಈ ವರ್ಷ 9 ಸಾವಿರ ಕೋಟಿ ರೂ ಮೀರದಂತೆ ಬಜೆಟ್ ಮಂಡನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಜನಪ್ರತಿನಿಧಿಗಳಿಲ್ಲದೆ ಸತತ ಎರಡನೇ ವರ್ಷವೂ ಪಾಲಿಕೆ ಆಡಳಿತಾಧಿಕಾರಿ ನೇತೃತ್ವದಲ್ಲಿ ಮಂಡಿಸಲಾಗುತ್ತಿದೆ. ಮಾಸಾಂತ್ಯದಲ್ಲಿ ಆಯವ್ಯಯ ಮಂಡನೆ ಆಗಲಿದೆ. ಎರಡು ತಿಂಗಳಿಂದ ಪಾಲಿಕೆಯ 23 ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಿ ಆದಾಯ ಕ್ರೋಢೀಕರಣ ಮತ್ತು ವೆಚ್ಚದ ಬಗ್ಗೆ ಲೆಕ್ಕಾಚಾರ ಮಾಡಿ ಈ ಮೊದಲು ಕರಡು ಪ್ರತಿ ಸಿದ್ದಪಡಿಸಲಾಗಿತ್ತು. ಆದರೆ, ಪಾಲಿಕೆಯಲ್ಲಿ ಕಡ್ಡಾಯವಾಗಿ ಆರ್ಥಿಕ ಶಿಸ್ತು ತರುವ ನಿಟ್ಟಿನಲ್ಲಿ ಇತ್ತೀಚೆಗೆ ಸರ್ಕಾರ ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ 2021 ಅನ್ನು ಜಾರಿಗೊಳಿಸಿದೆ. ಈ ಕಾಯ್ದೆಯ ನಿಯಮಗಳನ್ನು 2022- 23ನೇ ಸಾಲಿನ ಬಜೆಟ್‌ನಲ್ಲಿಯೇ ಅಳವಡಿಕೆ ಮಾಡಿಕೊಳ್ಳುವಂತೆ ಸೂಚಿಸಿರುವುದರಿಂದ ಈವರೆಗೆ ಸಿದ್ದಪಡಿಸಿದ್ದ ಕರಡು ಪ್ರತಿಯಲ್ಲಿ ವೆಚ್ಚ ತಗ್ಗಿಸುವುದು ಸೇರಿ ಕೆಲವು ಬದಲಾವಣೆ ಪಾಲಿಕೆ ಮಾಡಲಿದೆ ಎಂದಿದ್ದಾರೆ.
Kshetra Samachara
21/03/2022 06:41 pm