ಆನೇಕಲ್ : ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಆನೇಕಲ್ ತಾಲೂಕಿನಲ್ಲಿ ಹಲವು ಕೆರೆಗಳು ತುಂಬಿ ಕೋಡಿ ಬಿದ್ದಿರುವುದು ಒಂದು ಕಡೆಯಾದರೆ, ಆನೇಕಲ್ ಪಟ್ಟಣದ ದೊಡ್ಡಕೆರೆಯಲ್ಲಿ ಮಳೆ ಬಂದರೂ ಕೆರೆಯಲ್ಲಿ ಮಾತ್ರ ನೀರಿಲ್ಲದೆ ಬಣಗುಡುತ್ತಿವೆ.
ಇಂದು ಆನೇಕಲ್ ತಹಶೀಲ್ದಾರ್ ದಿನೇಶ್ ನೇತೃತ್ವದಲ್ಲಿ ದೊಡ್ಡ ಕೆರೆ ಸುತ್ತಮುತ್ತಲ ರಾಜಕಾಲುವೆಗಳ ಪರಿಶೀಲನೆ ಮಾಡಿದ್ದಾರೆ. ದೊಡ್ಡಕೆರೆಗೆ ನೀರು ಹರಿಯುತ್ತಿದ್ದ ಹಲವು ಮುಖ್ಯ ಕಾಲುವೆಗಳನ್ನು ಮುಚ್ಚಲಾಗಿದ್ದು, ಇದರಿಂದ ಕೆರೆಗೆ ನೀರು ಹರಿಯದೇ ಕೆರೆ ತನ್ನ ಸ್ವರೂಪ ಕಳೆದುಕೊಳ್ಳುತ್ತಿದೆ.
ಬಾರಿ ಮಳೆಯಾದರೂ ಕೆರೆಗೆ ನೀರು ಸೇರದಿರುವುದಕ್ಕೆ ಸ್ಥಳೀಯರು ಆತಂಕಕ್ಕೀಡಾಗಿದ್ದು, ಕೆರೆಯ ಸುತ್ತಮುತ್ತಲ ಗ್ರಾಮಗಳ ಅಂತರ್ಜಲ ಸಂಪೂರ್ಣ ಕಡಿಮೆಯಾಗಿದೆ. ಹೀಗಾಗಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನ ತೆರವು ಗೊಳಿಸುವ ನಿಟ್ಟಿನಲ್ಲಿ ಕೆರೆ ತಜ್ಞ ಕಾಪ್ಟನ್ ಸಂತೋಷ್ ನೇತೃತ್ವದಲ್ಲಿ ನಾಳೆಯಿಂದ ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ದಿನೇಶ್ ಮಾಹಿತಿ ನೀಡಿದ್ದಾರೆ.
ಇಂದು ನಡೆದ ಪರಿಶೀಲನೆಯಲ್ಲಿ ಕೆರೆಯ ಸುತ್ತಮುತ್ತ ಸುಮಾರು 6 ಕಡೆಗಳಲ್ಲಿ ರಾಜಕಾಲುವೆ ಮುಚ್ಚಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ನಾಳೆಯಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಎಇ ರಾಜಣ್ಣ ತಿಳಿಸಿದ್ದಾರೆ.
Kshetra Samachara
26/11/2021 09:42 pm