ಬಿಡಿಎ ಕೇಂದ್ರ ಕಚೇರಿ ಮೇಲಿನ ಎಸಿಬಿ ದಾಳಿ ಬಳಿಕ ಮುಂದೇನಾಯ್ತು ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. 300 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿರುವ ಬಗ್ಗೆ ಎಸಿಬಿ ಶಂಕೆ ವ್ಯಕ್ತಪಡಿಸಿ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಆದ್ರೆ ತನಿಖೆ ಮಾತ್ರ ಹಳ್ಳ ಹಿಡಿದು ಹೋಗಿದೆ. ಇಲ್ಲಿಯವರೆಗೆ ಯಾರೊಬ್ಬರ ವಿರುದ್ಧವೂ ತನಿಖೆ ನಡೆಯದೇ ಇರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹೌದು…ಬಿಡಿಎನಲ್ಲಿ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಎಸಿಬಿ, ಬಿಡಿಎ ಕಚೇರಿ ಹಾಗೂ ಬ್ರೋಕರ್ ಗಳ ಮನೆ, ಕಚೇರಿ ಮೇಲೆ ದಾಳಿ ಮಾಡಿ, 2013 ರಿಂದ 2020 ವರೆಗೆ ನಡೆದ ಅಕ್ರಮಗಳ ಬೇಟೆಯಾಡಿತ್ತು. ಸುಮಾರು 300 ಕೋಟಿ ಗಿಂತ ಹೆಚ್ಚು ಅಕ್ರಮವಾಗಿರೋದನ್ನ ದಾಳಿ ವೇಳೆ ಪತ್ತೆ ಹಚ್ಚಿತ್ತು. ದಾಳಿ ವೇಳೆ 8 ಮಂದಿ ಕೆಎಎಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ, ದಲ್ಲಾಳಿಗಳನ್ನ ವಿಚಾರಣೆಗೆ ಒಳಪಡಿಸಿದ್ರು..ಆದ್ರೆ ಅಂದು ವಿಚಾರಣೆಗೆ ಒಳಗಾದ ಯಾವ ಅಧಿಕಾರಿಯ ವಿರುದ್ಧವೂ ಇಲ್ಲಿಯವರೆಗೆ ಕ್ರಮ ಆಗಿಲ್ಲ. ಅವರೆಲ್ಲರಿಗೂ ಪ್ರಮೋಷನ್ ನೀಡೋ ಮೂಲಕ ಆಯಕಟ್ಟಿ ಜಾಗ ನೀಡಲಾಗಿದೆ. ಇದು ಪ್ರಾಧಿಕಾರದ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದಾಖಲೆಗಳನ್ನ ಪರಿಶೀಲಿಸಿ ತನಿಖೆಗೆ ಅನುಮತಿ ಕೊಡುವಂತೆ ಸಿಎಂ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು. ಆದರೆ ನಗರಾಭಿವೃದ್ಧಿ ಇಲಾಖೆ ತನಿಖೆಯ ಬಗ್ಗೆ ಜಾಣಮೌನ ವಹಿಸಿದೆ. ದಾಳಿ ವೇಳೆ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆಯ 75 ಕೋಟಿ ಬೆಲೆ ಬಾಳುವ 6 ನಿವೇಶನಗಳನ್ನ ಸುಳ್ಳು ಮಾಹಿತಿ ಸೈಟ್ ಹಂಚಿಕೆ, ಕೆಂಗೇರಿ ಹೋಬಳಿ ಉಲ್ಲಾಳ ಗ್ರಾಮದಲ್ಲಿ 1.5 ಕೋಟಿ ಮೌಲ್ಯದ ಅಕ್ರಮ ನಿವೇಶನಗಳು ಮಂಜೂರು, ಸ್ಯಾಟಲೈಟ್ ಟೌನ್ ಬಳಿ 80 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು ಹೀಗೆ ನಾನಾ ಅಕ್ರಮಗಳು ಪತ್ತೆ ಆಗಿದ್ದವು. ಆದ್ರೆ ಇವೆಲ್ಲಾ ಹಗರಣಗಳು ಮುಚ್ಚಿ ಹಾಕಿರೋ ಶಂಕೆ ಶುರುವಾಗಿದೆ. ಇದ್ರ ಹಿಂದೆ ಮಂತ್ರಿಗಳ ಒತ್ತಡ ಇದ್ಯಾ ಅನ್ನೋ ಅನುಮಾನ ಕೂಡಾ ಜನರಲ್ಲಿ ಮೂಡಿದೆ.
ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
03/08/2022 05:22 pm