ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2022-23ನೇ ಶೈಕ್ಷಣಿಕ ಸಾಲಿನ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದಿರುವ (ಸಿಇಟಿ) ಅಭ್ಯರ್ಥಿಗಳ ದಾಖಲೆಗಳ ಪರಿಶೀಲನಾ ಕಾರ್ಯ ಆರಂಭಿಸಿದೆ.
ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಆಧರಿಸಿ, ಜಾತಿ, ಆದಾಯ ಪ್ರಮಾಣಪತ್ರ, ಹೈದರಾಬಾದ್ ಮೀಸಲಾತಿ ಪ್ರಮಾಣ ಪತ್ರಗಳ ಪರಿಶೀಲನೆ ಆನ್ ಲೈನ್ ಮೂಲಕ ನಡೆಸಲಾಗುತ್ತಿದೆ. ನೋಂದಣಿ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದರೆ ಅಂತಹ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು. ನಂತರ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.
2,10,829 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜುಲೈ 31ರಂದು ಫಲಿತಾಂಶ ಪ್ರಕಟವಾಗಿತ್ತು. ಎಂಜಿನಿಯರಿಂಗ್ ಕೋರ್ಸ್ಗೆ 1,71,656 ವಿದ್ಯಾರ್ಥಿಗಳು, ಕೃಷಿಗೆ 1,39,968, ಪಶುಸಂಗೋಪನೆಗೆ 1,42,820 ಯೋಗ ಮತ್ತು ನ್ಯಾಚುರೋಪತಿಗೆ 1,42,750 ಹಾಗೂ ಬಿ.ಫಾರ್ಮಾಗೆ 1,74,568 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು. ಆ.5ಕ್ಕೆ ನಿಗದಿಯಾಗಿದ್ದ ದಾಖಲಾತಿ ಪರಿಶೀಲನಾ ಕಾರ್ಯ, ಆ.10ರಿಂದ ಆರಂಭವಾಗಿದೆ.
ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ಸೀಟುಗಳ ಹಂಚಿಕೆಗಾಗಿ ಆನ್ ಲೈನ್ ಕೌನ್ಸೆಲಿಂಗ್ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಆ.30ರಂದು ಸೀಟ್ ಮ್ಯಾಟ್ರಿಕ್ಸ್ ಪರಿಶೀಲನೆ, ಸೆ.1ರಿಂದ 4ರವರೆಗೆ ಅರ್ಹ ಅಭ್ಯರ್ಥಿಗಳಿಗೆ ನೋಂದಣಿ, ಸೆ.2ರಿಂದ 5ರವರೆಗೆ ಆಯ್ಕೆಗೆ ಅವಕಾಶ ನೀಡಲಾಗಿದೆ. 6 ಮತ್ತು 7ರಂದು ಸೀಟು ಹಂಚಿಕೆ ಪ್ರಕ್ರಿಯೆ, 8ರಂದು ಹಂಚಿಕೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. 9ರಿಂದ 13ರವರೆಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು. ಎರಡನೇ ಸುತ್ತು 17ರಿಂದ ಆರಂಭವಾಗುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ.
PublicNext
11/08/2022 12:46 pm