ಬೆಂಗಳೂರು: ಕ್ಲಾರೆನ್ಸ್ ಹೈಸ್ಕೂಲ್ನಲ್ಲಿ ಬೈಬಲ್ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳಿಂದ ನಿನ್ನೆ ಆಕ್ರೋಶ ವ್ಯಕ್ತವಾಗಿತ್ತು. ರಿಚರ್ಡ್ಸ್ ಟೌನ್‌ನಲ್ಲಿರುವ ಈ ಶಾಲೆಗೆ ಪ್ರವೇಶಾತಿ ಪಡೆಯುವ ಪ್ರತಿ ವಿದ್ಯಾರ್ಥಿಗಳಿಗೂ ಬೈಬಲ್ ಓದುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಕ್ರಿಶ್ಚನೇತರ ಮಕ್ಕಳಿಗೆ ಬೈಬಲ್ ಕಲಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಲು ಶಾಲೆಯ ಆಡಳಿತ ಮಂಡಳಿ ಹಿಂದೇಟು ಹಾಕಿತ್ತು. ಹೈಸ್ಕೂಲ್ ಕಾನೂನಿನ ನಿಯಮಗಳಂತೆಯೇ ನಡೆಯುತ್ತಿದ್ದು, ವಕೀಲರ ಜೊತೆ ಈ ಬಗ್ಗೆ ಸಮಾಲೋಚಿಸಲಾಗುವುದು ಅಂತ ಹೇಳಿ ಪ್ರಾಂಶುಪಾಲರು ಕೈತೊಳೆದುಕೊಂಡಿದ್ದರು.
ಪತ್ರ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಇದೀಗ ಈ ಶಾಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಸಂಬಂಧ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಕ್ಲಾರೆನ್ಸ್ ಶಾಲೆ ಮೇಲುನೋಟಕ್ಕೆ ಸಂವಿಧಾನದ ಆರ್ಟಿಕಲ್ 25 ಮತ್ತು 28 (3) ಉಲ್ಲಂಘನೆ ಎದ್ದು ಕಾಣುತ್ತಿದೆ ಎಂದು ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ಗೆ ಪತ್ರ ಬರೆದಿದ್ದು, ಏಳು ದಿನಗಳ ಒಳಗೆ ತನಿಖೆ ಮತ್ತು ತೆಗೆದುಕೊಂಡಿರುವ ಕ್ರಮದ ವಿವರ ವರದಿ ಸಲ್ಲಿಸಲು ಆಯೋಗ ಸೂಚನೆ ನೀಡಿದೆ.
PublicNext
26/04/2022 04:49 pm