ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನಿಂದ ಕಳೆಗುಂದಿದ್ದ ಬೆಂಗಳೂರು ಕರಗ ಮಹೋತ್ಸವವನ್ನು ಈ ಸಲ ಅದ್ಧೂರಿಯಾಗಿ ನಡೆಸಲು ಸಕಲ ತಯಾರಿ ನಡೆದಿದೆ. ಇಂದಿನಿಂದ ಐತಿಹಾಸಿಕ ಮಹೋತ್ಸವ ಶುರುವಾಗಲಿದ್ದು, ಎಂಟು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ. ಇದಕ್ಕಾಗಿ ಧರ್ಮರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಬಿಬಿಎಂಪಿ ವತಿಯಿಂದ 50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಕುರಿತು ಪಾಲಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಆಯುಕ್ತ ಗೌರವ ಗುಪ್ತಾ, ಸಪ್ತಮಿ ದಿನವಾದ ಇಂದು ಕರಗ ಮಹೋತ್ಸವ ನಡೆಯಲಿದ್ದು, ಕರಗಶಕ್ತೋತ್ಸವ ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ.
ಕರಗ ಉತ್ಸವ ನಡೆಯುವ ಬೀದಿಗಳಲ್ಲಿ ದೀಪಗಳ ಅಳವಡಿಕೆ ವ್ಯವಸ್ಥೆಯಾಗಿದೆ. ಪಾಲಿಕೆಯ ಆರೋಗ್ಯ ಇಲಾಖೆ ವತಿಯಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ. ಭಕ್ತಾದಿಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಇ-ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದರ್ಗಾದ ಕಾರ್ಯದರ್ಶಿ ಮಹಮದ್ ಹಿಜಾಯಿತುಲ್ಲಾ ಮಾತನಾಡಿ, ಶಾಂತಿ ಪೂರ್ವಕವಾಗಿ ಕರಗ ನಡೆಯಬೇಕು. ಕರಗ ಮಹೋತ್ಸವಕ್ಕೆ ಇತಿಹಾಸವಿದ್ದು, ನಮ್ಮಿಂದ ಎಲ್ಲ ತರಹದ ಸಹಕಾರ ಇರಲಿದೆ. ಹಬ್ಬದ ರೀತಿಯಲ್ಲಿ ಇದನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದು, ನಾವು ದೇವಸ್ಥಾನಕ್ಕೆ ಹೋಗುವುದು, ಅವರು ದರ್ಗಾಕ್ಕೆ ಬರುವುದು ಹಿಂದಿನಿಂದಲೂ ನಡೆದು ಬಂದಿದೆ ಎಂದು ತಿಳಿಸಿದರು.
PublicNext
08/04/2022 07:51 pm