ಬೆಂಗಳೂರು: ಪೊಲೀಸರಿಗೆ ಮೈಯೆಲ್ಲಾ ಕಣ್ ಆಗಿರ್ಬೇಕು ಅನ್ನೋದಕ್ಕೆ ಈ ಕೇಸು ನಿದರ್ಶನ. ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕ ಸಣ್ಣ ಮಾಹಿತಿ ಹಿಂದೆ ಬಿದ್ದ ಪೊಲೀಸ್ರಿಗೆ ಒಂದು ಬೃಹತ್ ಜಾಲವನ್ನೇ ಪತ್ತೆ ಮಾಡುವಂತಾಗಿದೆ!
ಯಸ್... ಅಶೋಕನಗರ ಪೊಲೀಸರು ಇಬ್ಬರು ಅಂತರ್ ರಾಜ್ಯ ಕಾರುಗಳ್ಳರನ್ನು ಬಂಧಿಸಿದ್ದಾರೆ. ಅಯಾಝ್ ಪಾಷಾ @ ಮೌಲಾ ಹಾಗೂ ಮತಿನುದ್ದಿನ್ @ ಮತಿನ್ ಎಂಬಿಬ್ಬರನ್ನ ಬಂಧಿಸಿರುವ ಪೊಲೀಸರು ಒಂದು ಕೋಟಿ 20 ಲಕ್ಷ ಮೌಲ್ಯದ 9 ಕಾರುಗಳನ್ನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಹಲವು ವರ್ಷಗಳಿಂದಲೂ ಇದೇ ರೀತಿಯಾದ ಕೃತ್ಯವನ್ನ ಮಾಡಿರೋದು ಪತ್ತೆಯಾಗಿದೆ.
ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಕಾರು ಕಳ್ಳರು ಕದ್ದ ಕಾರಿನಲ್ಲಿ ಓಡಾಡುತ್ತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನಲೆ ಯಾವ ಕಾರು, ಕಾರಿನ ಬಣ್ಣ ಎಲ್ಲವನ್ನೂ ತಿಳಿದುಕೊಂಡ ಎಸ್ಸೈ ಮಲ್ಲಿಕಾರ್ಜುನ ಹಾಗೂ ಕ್ರೈಂ ಪಿಸಿ ಚಂದ್ರು, ತಮ್ಮ ಇನ್ಫಾರ್ಮರ್ ಗಳಿಗೆ ಮೆಸೇಜ್ ಪಾಸ್ ಮಾಡಿದ್ದರು. ನಿರಂತರ 3 ದಿನಗಳ ಕಾರ್ಯಾಚರಣೆ ನಡೆಸಿದ ಇಬ್ಬರು, ಮೊದಲು ಅಯಾಝ್ ಪಾಷಾ ಎಂಬಾತನನ್ನ ಲಾಕ್ ಮಾಡಿದ್ರು.
ನಂತರ ಮೊಬೈಲ್ ಮುಖಾಂತರ ಮತ್ತೊಬ್ಬ ಆರೋಪಿ ಮತೀನುದ್ದಿನ್ ನನ್ನೂ ಹೆಡೆಮುರಿ ಕಟ್ಟಿ ಇಬ್ಬರನ್ನ ವಿಚಾರಣೆ ನಡೆಸಿದಾಗ ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವೆಡೆ ಕಾರುಗಳನ್ನ ಕದ್ದು ನಗರಕ್ಕೆ ತಂದು ಇಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ ಮಾರಾಟ ಮಾಡ್ತಿದ್ದರು ಎಂಬ ವಿಚಾರ ಹೊರ ಬಿದ್ದಿದೆ.
ಇವರಿಬ್ಬರೇ ಅಲ್ಲ, ಸಹಚರರಾದ ಸೈಯದ್ ಸಮೀರ್, ಡೆಲ್ಲಿ ಇಮ್ರಾನ್ , ತನ್ನು@ ತನ್ವೀರ್, ಯಾರಬ್ ಎಂಬವರನ್ನೂ ಬಂಧಿಸಲಾಗಿದೆ. ಬಂಧಿತರಿಂದ 5 ಹ್ಯೂಂಡೈ ಕ್ರೇಟಾ , 2 ಇನ್ನೋವಾ, 1 ಮಾರುತಿ ಬಲೆನೋ,1 ವೋಲ್ಸ್ ವ್ಯಾಗನ್ ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.
ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಸದ್ಯ ಮತ್ತಷ್ಟು ಕಡೆ ಕಾರು ಕದ್ದು ಮಾರಾಟ ಮಾಡಿರುವ ಬಗ್ಗೆಯೂ ವಿಚಾರಣೆ ಮುಂದುವರೆದಿದೆ.
PublicNext
02/09/2022 04:46 pm