ಬೆಂಗಳೂರು: ಬಾಡಿಗೆ ಮನೆಯಲ್ಲಿದ್ದ ಯುವತಿಯನ್ನ ಹೆದರಿಸಿ ತಲೆಗೆ ಪಿಸ್ತೂಲ್ ಇಟ್ಟು ಆತ್ಯಾಚಾರ ಎಸಗಿದ ಆರೋಪದಡಿ ಮನೆ ಮಾಲೀಕನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಶಾಂತಿನಗರ ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಪೊಲೀಸರು ಮೂರು ದಿನಗಳ ಕಾಲ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಯು ಟೈಲ್ಸ್ ಬಿಸೆನೆಸ್ ಮಾಡಿಕೊಂಡಿದ್ದು ಶಾಂತಿನಗರದ ನಿವಾಸಿಯಾಗಿದ್ದಾನೆ. ಈತನಿಗೆ ಸೇರಿದ ಮನೆಯಲ್ಲಿ ಪಶ್ಚಿಮ ಬಂಗಾಳದ ಮೂಲದ ಯುವತಿ ಕಳೆದ ಮಾರ್ಚ್‌ನಿಂದ ಬಾಡಿಗೆಯಲ್ಲಿದ್ದಳು. ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿ ಮನೆಗೆ ಆಗಾಗ ಸ್ನೇಹಿತರು ಬರುತ್ತಿರುವ ಬಗ್ಗೆ ಮನೆ ಮಾಲೀಕ ಯುವತಿ ಬಳಿ ತಗಾದೆ ತೆಗೆದಿದ್ದ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಸಂಘರ್ಷ ನಡೆದಿತ್ತು. ಕೆಲ ದಿನಗಳ ಬಳಿಕ ಮನೆಗೆ ಯುವತಿಯ ಸ್ನೇಹಿತ ಉಳಿದುಕೊಂಡಿದ್ದ.
ಬಾಡಿಗೆ ಕೊಟ್ಟರೆ ಇಲ್ಲಸಲ್ಲದ ಚಟುವಟಿಕೆ ನಡೆಸುತ್ತೀರಾ? ಎಂದು ಮನೆ ಮಾಲೀಕ ಯುವತಿ ಜೊತೆ ಗಲಾಟೆ ಮಾಡಿಕೊಂಡಿದ್ದನಂತೆ. ಪೊಲೀಸರು ಬಂದರೆ ನಿನ್ನ ಮೇಲೆ ಕೇಸ್ ದಾಖಲಿಸುತ್ತಾರೆ ಅಂತ ಸುಳ್ಳು ಹೇಳಿ ಹುಡುಗರನ್ನ ಕಳುಹಿಸಿ ಹೆದರಿಸಿದ್ದ. ಹಾಗೂ ಯುವತಿ ಪೋಷಕರಿಗೆ ತಿಳಿಸುವುದಾಗಿ ಯುವತಿಗೆ ಬ್ಲಾಕ್ ಮೇಲ್ ಮಾಡಿ ಕಳೆದ ಏಪ್ರಿಲ್ 11ರಂದು ಆಕೆಯ ಮನೆಗೆ ಹೋದ ಮಾಲೀಕ ಮಾತನಾಡುವ ನೆಪದಲ್ಲಿ ತನ್ನ ಬಳಿಯಿದ್ದ ಲೈಸೆನ್ಸ್ ರಿವಾಲ್ವರ್ ತಲೆಗೆ ಇಟ್ಟು ತನ್ನೊಂದಿಗೆ ಸಹಕರಿಸುವಂತೆ ಒತ್ತಡ ಹೇರಿದ್ದ ಎಂದು ಯುವತಿ ದೂರಿದ್ದಾಳೆ.
ಬಳಿಕ ನಡೆದಿದ್ದ ಕೃತ್ಯದ ಬಗ್ಗೆ ಯುವತಿ ಪೋಷಕರಿಗೆ ತಿಳಿಸಿ ದೂರು ನೀಡಿರೋದಾಗಿ ತಿಳಿದು ಬಂದಿದೆ. ಇನ್ನೊಂದೆಡೆ ಯುವತಿಯ ಸ್ನೇಹಿತ ಮನೆಗೆ ಬರೋದನ್ನ ಪ್ರಶ್ನಿಸಿದ್ದಕ್ಕೆ ಯುವತಿ ಸುಳ್ಳು ದೂರು ದಾಖಲಿಸಿದ್ದಾಳೆಂದು ಮನೆ ಮಾಲೀಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆಂದು ತಿಳಿದು ಬಂದಿದೆ.
PublicNext
23/05/2022 02:10 pm