ಬೆಂಗಳೂರು: ಉಂಡು ಹೋದ ಕೊಂಡು ಹೋದ ಎಂಬ ಮಾತಿನಂತೆ ವ್ಯಕ್ತಿಯೋರ್ವ ಸ್ನೇಹಿತನ ಮನೆಗೆ ಪಾರ್ಟಿ ಮಾಡಲು ಬಂದು ಮನೆಯಲ್ಲಿದ್ದ ಚಿನ್ನ ದೋಚಿ ಪೊಲೀಸರ ಅತಿಥಿಯಾಗಿದ್ದಾನೆ.
ಭರತ್ ಬಂಧಿತ ಆರೋಪಿಯಾಗಿದ್ದು ಸ್ನೇಹಿತ ಮಣಿ ಮನೆಯಲ್ಲಿ ಕಳ್ಳತನ ಮಾಡಿದ್ದ 35 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಸುಬ್ರಮಣ್ಯಪುರ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.
ಏರೋನಾಟಿಕಲ್ ಇಂಜಿನಿಯರ್ ವ್ಯಾಸಂಗ ಮಾಡಿದ್ದ ಭರತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಕೈ ತುಂಬಾ ಸಂಬಳ ಪಡೆಯುತ್ತಿದ್ದ. ಉತ್ತರಹಳ್ಳಿಯ ಮೂಕಾಂಬಿಕ ನಗರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಭರತ್ ಸೇರಿದಂತೆ ಇನ್ನಿಬ್ಬರನ್ನ ಮಣಿ ಮನೆಯಲ್ಲಿ ಯಾರು ಇಲ್ಲದಾಗ ಪಾರ್ಟಿ ಮಾಡಲು ಕರೆದಿದ್ದ. ಸ್ನೇಹಿತನ ಆಹ್ವಾನದಂತೆ ಭರತ್ ಡಿಸೆಂಬರ್ 4ರಂದು ಮನೆಗೆ ಬಂದು ಒಟ್ಟಿಗೆ ಪಾರ್ಟಿ ಮಾಡಿದ್ದ. ರಾತ್ರಿ ಆತನ ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಮಣಿಗೆ ಮದುವೆ ನಿಗದಿಯಾಗಿದ್ದು ಇದಕ್ಕಾಗಿ ಮನೆಯವರು 453 ಗ್ರಾಂ ಖರೀದಿಸಿ ಇಟ್ಟಿದ್ದರು. ಇದನ್ನ ಅರಿತ ಆರೋಪಿಯು ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬೀರುವಿನಲ್ಲಿದ್ದ ಚಿನ್ನ ಎಗರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನಾಭರಣ ಕದ್ದು ಸ್ನೇಹಿತನ ಜೊತೆಯಲ್ಲೇ ಪುಷ್ಟ ಸಿನಿಮಾ ನೋಡಿದ..!
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಭರತ್, ತನ್ನ ಮೇಲೆ ಅನುಮಾನ ಬರದಂತೆ ರಾತ್ರಿ ಅಲ್ಲೇ ಉಳಿದುಕೊಂಡಿದ್ದ. ಬೆಳಗ್ಗೆ ಮಣಿ ಜೊತೆ ಪುಷ್ಟ ಸಿನಿಮಾ ನೋಡಿದ್ದ. ಮಾರನೇ ದಿನ ಮಣಿ ಮನೆಯವರು ಬಂದು ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ವಿಚಾರವನ್ನ ಸ್ನೇಹಿತ ಭರತ್ ಗೆ ಮಣಿ ತಿಳಿಸಿದ್ದ. ಖುದ್ದು ಆರೋಪಿಯೇ ಪೊಲೀಸ್ ಠಾಣೆಗೆ ತೆರಳಿ ಮಣಿಯಿಂದ ದೂರು ಕೊಡಿಸಿದ್ದ. ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಎಂ.ಎಸ್.ರಾಜು ಅವರ ತಂಡವು ಪಾರ್ಟಿ ಮಾಡಲು ಮನೆಗೆ ಮೂವರು ಸ್ನೇಹಿತರನ್ನ ತೀವ್ರ ವಿಚಾರಣೆಗೊಳಪಡಿಸಿದಾಗ ಭರತ್ ದುರಾಸೆಗೆ ಒಳಪಟ್ಟು ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
13/12/2024 05:17 pm