ದೊಡ್ಡಬಳ್ಳಾಪುರ: ಕೋಳಿ ಖರೀದಿಸಲು ತೆರಳುತ್ತಿದ್ದ ಕೋಳಿ ಸಾಗಾಣಿಕೆಯ ವಾಹನವನ್ನು ಅಡ್ಡಗಟ್ಟಿ ವಾಹನದಲ್ಲಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ 7 ಲಕ್ಷ 64 ಸಾವಿರ ಹಣವನ್ನು ದರೋಡೆ ಮಾಡಿದ್ದ ಮೂವರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 7 ರಂದು ನಗರದ ಎಪಿಎಂಸಿ ಮುಂಭಾಗದಲ್ಲಿರುವ ಎಚ್.ಎ.ಜೆ ಚಿಕನ್ ಸೆಂಟರ್ ಕಾರ್ಮಿಕರಾದ ಲಕ್ಷ್ಮೀಪತಿ, ಮಂಜುನಾಥ್, ಶ್ರೀಧರ್ ಎನ್ನುವವರು ಕೋಳಿ ಖರೀದಿಸಲು ಹೊಸೂರಿಗೆ ತೆರಳುತ್ತಿದ್ದ ವೇಳೆ ದೊಡ್ಡಬಳ್ಳಾಪುರ ತಾಲೂಕಿನ ಅರಳು ಮಲ್ಲಿಗೆ ಸಮೀಪ ದ್ವಿಚಕ್ರ ವಾಹನವೊಂದರಲ್ಲಿ ಬಂದ ಮುಸುಕುಧಾರಿಗಳಿಬ್ಬರು ಕೋಳಿ ಸಾಗಣಿಕೆ ವಾಹನಕ್ಕೆ ಡಿಕ್ಕಿ ಹೊಡೆದು ಜಗಳಕ್ಕಿಳಿದಿದ್ದಾರೆ. ಇದೇ ಸಮಯಕ್ಕೆ ಮತ್ತೆರಡು ದ್ವಿಚಕ್ರ ವಾಹನದಲ್ಲಿ ಬಂದ ಮತ್ತೆ ನಾಲ್ವರು ವಾಹನದಲ್ಲಿ ಇಡಲಾಗಿದ್ದ 7 ಲಕ್ಷ 64 ಸಾವಿರ ಹಣ ದೋಚಿದ್ದಾರೆ. ಈ ಸಮಯದಲ್ಲಿ ತಡೆಯಲು ಮುಂದಾದಾಗ ಕಾರ್ಮಿಕರನ್ನ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದರೋಡೆಕೊರರ ಪತ್ತೆಗಾಗಿ ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನ ಬೆಂಗಳೂರಿನ ಅಜಯ್ (28), ಗಂಟಿಗಾನಹಳ್ಳಿಯ ಪುನೀತ್ (25 ) ಹಾಗೂ ತರುಹುಣುಸೆ ಗ್ರಾಮದ ಶ್ರೀಧರ್ (27) ಎಂದು ಗುರುತಿಸಲಾಗಿದ್ದು, ಆರೋಪಿಗಳ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ ಮೂರು ಬೈಕ್ ಹಾಗೂ ಎರಡು ಲಕ್ಷ ನಗದು ವಶಪಡಿಸಿಕೊಂಡಿದ್ದು ಉಳಿದವರ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
Kshetra Samachara
26/03/2022 07:24 pm