ಬೆಂಗಳೂರು: ತಾಯಿ ಕರುಳು ಅನ್ನೋದೇ ಇದಕ್ಕೆ. ತನ್ನ ಮಗುವಿಗೆ ಸಣ್ಣ ನೋವಾದ್ರೂ ತಾಯಿ ಮನಸ್ಸು ತಡೆದುಕೊಳ್ಳಲ್ಲ. ಅಂತದ್ರಲ್ಲಿ ಹೆತ್ತು, ಹೊತ್ತು ಸಾಕಿದ ಮಗು ಕಣ್ಣ ಮುಂದೆಯೇ ಪ್ರಾಣ ಬಿಟ್ರೆ ತಾಯಿ ಹೃದಯ ಹೇಗಾಗಬೇಡ!?
ಹೌದು, ಇಂತಹದೊಂದು ಮನ ಮಿಡಿಯುವ ಘಟನೆ ನಗರದ ಸದ್ಗುಂಟೆಪಾಳ್ಯದಲ್ಲಿ ನಡೆದಿದೆ. ಕಣ್ಣ ಮುಂದೆಯೇ ಮಗು ಸಾವನ್ನ ಕಂಡ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಪತಿ ಸಂತೋಷ್ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ಪಲ್ಲವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲ್ಯಾಬ್ ಟೆಕ್ನಿಷಿಯನ್ ಸಂತೋಷ್ , ಪಲ್ಲವಿಯನ್ನ 3 ವರ್ಷದ ಹಿಂದೆ ಮದ್ವೆಯಾಗಿದ್ದರು. ಗಂಡ ಬಹಳ ಪ್ರೀತಿಯಿಂದಲೇ ನೋಡಿಕೊಳ್ತಿದ್ದ. ದಂಪತಿ ತಮ್ಮದೇ ಮಗುವಿನ ಆಸೆಯಲ್ಲಿದ್ದರು. ಆದರೆ, ವಿಧಿ ಆಟ ಬೇರೆಯೇ ಇತ್ತು. ಈ ಹಿಂದೆ ಗರ್ಭಿಣಿಯಾಗಿದ್ದ ಪಲ್ಲವಿಗೆ ಅಬಾರ್ಷನ್ ಆಗಿತ್ತು. ನಂತರ 6 ತಿಂಗಳ ಹಿಂದೆ ಪಲ್ಲವಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಅದಕ್ಕೆ ಸಾಕಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ನೀಡುತ್ತಿದ್ರು. ಆದರೆ ನೆನ್ನೆ ಮಗು ತಾಯಿ ಮುಂದೆಯೇ ಉಸಿರು ಬಿಟ್ಟಿತ್ತು.
ಇದರಿಂದ ಬಹುವಾಗಿ ನೊಂದ ಪಲ್ಲವಿ, ಪತಿಗೆ ಮಗುವಿನ ಸಾವಿನ ಬಗ್ಗೆ ಹೇಳದೆ ಸುದೀರ್ಘ ಪತ್ರ ಬರೆದಿದ್ದಾರೆ. "ಸಂತೋಷ್, ನೀ ನನಗೆ ಯಾವುದೇ ಕೊರತೆ ಮಾಡಿಲ್ಲ. ಈ ಜನ್ಮದಲ್ಲಿ ನಿನ್ನ ಮಗುವಿನ ತಾಯಿಯಾಗಲು ಸಾಧ್ಯವಾಗುತ್ತಿಲ್ಲ. ಮುಂದಿನ ಜನ್ಮದಲ್ಲಿ ನಿನ್ನ ಮಗುವಾಗಿ ಹುಟ್ಟಿ ಬರ್ತಿನಿ" ಎಂದು ಪತ್ರ ಬರೆದು ನೇಣಿಗೆ ಶರಣಾಗಿದ್ದಾರೆ!
PublicNext
15/02/2022 05:47 pm