ಮೈ ಬಗ್ಗಿಸಿ ಕೆಲಸ ಮಾಡೋದು ಇವರಿಗೆ ಕಷ್ಟ. ಆದ್ರೆ ಇವ್ರಿಗೆ ಐಶಾರಾಮಿ ಜೀವನ ಬೇಕು. ಅದ್ಕೆ ಇವ್ರು ಯಾರದ್ದೋ ದುಡ್ಡನ್ನ ನೀಟಾಗೇ ಎಗರಿಸಿದ್ರೆ ಲೈಫು ಹೈಫೈ ಆಗಿರುತ್ತೆ ಅಂತ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ರು. ಸದ್ಯ ಬೆಂಗಳೂರು ಬೈಯಪ್ಪನಹಳ್ಳಿ ಪೊಲೀಸ್ರ ಕೈಗೆ ತಗಲಾಕ್ಕೊಂಡಿದ್ದಾರೆ.
ಈ ಫೋಟೋದಲ್ಲಿರೋ ಈತನ ಹೆಸರು ಶಂಕರ ಇನ್ನೊಬ್ಬ ರವಿ. ಇಬ್ಬರೂ ಬೆಂಗಳೂರಿನ ಜೆಪಿ ನಗರದವ್ರು. ಹುಟ್ಟಿನಿಂದ ಕಷ್ಟಪಟ್ಟು ದುಡಿಯೋದಂದ್ರೆ ಮಾರು ದೂರಕ್ಕೆ ಓಡ್ತಿದ್ದ ಶಂಕರ ಹಾಗೂ ರವಿ ಅದ್ಹೇಗೋ ಏರಿಯಾದಲ್ಲಿ ಸ್ನೇಹಿತರಾಗಿಬಿಟ್ಟಿದ್ರು. ಈ ಸ್ನೇಹ ಎಣ್ಣೆ ಅಂಗಡಿಯ ಬಾಗಿಲವರೆಗೂ ಹೋಗಿ ನಂತರ ಮನೆಗಳ್ಳತನ ಮಾಡೋವರೆಗೂ ಹೋಗಿ ನಿಂತಿತ್ತು. ಕಳೆದ ಹನ್ನೆರಡು ವರ್ಷದಿಂದ ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಈ ಇಬ್ಬರ ಜೋಡಿ ಇತ್ತೀಚೆಗೆ ಬೈಯಪ್ಪನಹಳ್ಳಿ ಪೊಲೀಸ್ರ ಬಲೆಗೆ ಬಿದ್ದಿತ್ತು. ತನಿಖೆ ವೇಳೆ ಬರೋಬ್ಬರಿ ಎಂಟಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿರೋದು ಬಯಲಿಗೆ ಬಂದಿದೆ. ಅದೇ ರೀತಿ ಕದ್ದಿದ್ದ 40 ಲಕ್ಷ ರೂಪಾಯಿ ಮೌಲ್ಯದ 800 ಗ್ರಾಂ ಚಿನ್ನಾಭರಣ ಕೂಡ ವಶಕ್ಕೆ ಪಡೆಯಲಾಗಿದೆ .
ಈ ಸಿಸಿ ಟಿವಿ ದೃಶ್ಯಾವಳಿಯಲ್ಲಿರೋರು ಇದೇ ಶಂಕರ ಹಾಗೂ ರವಿ. ಮಹಾಲಕ್ಷ್ಮಿ ಲೇಔಟ್ ಮನೆಯೊಂದರಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ಚಿನ್ನಾಭರಣವನ್ನ ಕಂಡಕೂಡಲೇ ಕಿಟಕಿಯಿಂದ ಕಬ್ಬಿಣದ ಸರಳನ್ನ ಮನೆಯೊಳಕ್ಕೆ ಬಿಟ್ಟು ದೇವರ ಚಿನ್ನಾಭರಣವನ್ನ ಎಗರಿಸುವಂತಹ ಕೆಲಸವನ್ನ ಮಾಡಿದ್ರು. ಅದೇ ರೀತಿ ಮಹದೇವಪುರ, ಬೈಯಪ್ಪನಹಳ್ಳಿ ಸೇರಿದಂತೆ ನಾನಾ ಭಾಗದಲ್ಲೂ ಕಳ್ಳತನವನ್ನ ಮಾಡಿ ತಲೆಮರೆಸಿಕೊಂಡಿದ್ದರು. ಕಳ್ಳತನ ಮಾಡೋ ಟೈಮಲ್ಲಿ ಮೊಬೈಲ್ ಗಳನ್ನ ಬಳಸದೇ ಇರೋದು, ಮುಖ ಕಾಣದಂತೆ ಉಡುಪನ್ನ ಧರಿಸೋದನ್ನ ಹಾಗೂ ವಾಹನಗಳನ್ನ ಬಳಸದೇ ಇರೋದನ್ನ ಫುಲ್ ಫಾಲೋ ಮಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು.
ಸದ್ಯ ಕಳೆದ ಏಳೆಂಟು ವರ್ಷದಿಂದ ಪೊಲೀಸರಿಗೆ ಸವಾಲಾಗಿದ್ದ ಖತರ್ನಾಕ್ ಕಳ್ರು ಅಂತೂ ಇಂತೂ ಖಾಕಿ ಬಲೆಗೆ ಬಿದ್ದಿದ್ದಾರೆ. ಒಟ್ಟಿನಲ್ಲಿ ಕೈಕೆಸರಾಗದೇ ಬೇರೆಯವರ ಸಂಪತ್ತಲ್ಲಿ ಬಾಯಿ ಮೊಸರು ಮಾಡ್ಕೊಳ್ತಿದ್ದವ್ರು ಇದೀಗ ಜೈಲೂಟಕ್ಕೆ ಸಿದ್ಧರಾಗಿ ಕುಳಿತಿದ್ದಾರೆ.
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್
PublicNext
30/08/2022 08:19 pm