ಬೆಂಗಳೂರು: ಯಾರು ಹೆತ್ತ ಮಗಳೋ... ಯಾರೂ ಇಲ್ಲದ ಅಬಲೆಯೋ ಅಥವಾ ಸಬಲೆಯೋ ಗೊತ್ತಿಲ್ಲ. ಸಿಲಿಕಾನ್ ಸಿಟಿಯ ನಿರ್ಜನ ಪ್ರದೇಶದಲ್ಲಿ ಸುಟ್ಟು ಕರಕಲಾಗಿದ್ದಾಳೆ! ಕೊಲೆಗಡುಕರು ಆಕೆಯನ್ನು ಕೊಂದು ಹಾಕಿ, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ಕೊಲೆ ಪ್ರಕರಣಕ್ಕೀಗ ಖಾಕಿ ಎಂಟ್ರಿಯಾಗಿದ್ದು, ರೇಪ್ ಆಂಡ್ ಮರ್ಡರ್ ಎಂಬ ಅನುಮಾನ ವ್ಯಕ್ತವಾಗಿದೆ.
ಸುತ್ತಲೂ ಪೊಲೀಸ್ ಸರ್ಪಗಾವಲು. ಆತಂಕದಿಂದಲೇ ನಿಂತು ನೋಡುತ್ತಿರುವ ಸ್ಥಳೀಯರು. ಮತ್ತೊಂದು ಕಡೆ ಸುಟ್ಟು ಕರಕಲಾಗಿ ಹೆಣವಾಗಿ ಬಿದ್ದಿರುವ ಹೆಣ್ಣುಮಗಳು! ಸ್ಥಳದಲ್ಲಿ ಎಫ್ ಎಸ್ಎಲ್ ತಂಡದಿಂದ ಪರಿಶೀಲನೆ... ಈ ಚಿತ್ರಣ ಕಂಡು ಬಂದಿದ್ದು ಬೆಂಗಳೂರಿನ ಕೆಂಗೇರಿ ಠಾಣಾ ವ್ಯಾಪ್ತಿಯ ರಾಮಸಂದ್ರ ಬಳಿಯ ನಿರ್ಜನ ಪ್ರದೇಶದಲ್ಲಿ.
ಅಷ್ಟಕ್ಕೂ ಆಗಿರೋದೇನಂದ್ರೆ ಇವತ್ತು ಬೆಳಗ್ಗೆ ಸ್ಥಳೀಯರೊಬ್ಬರು ಠಾಣೆಗೆ ಕರೆ ಮಾಡಿದ್ರು. ಒಂದು ಮೃತದೇಹ ಸುಟ್ಟ ಸ್ಥಿತಿಯಲ್ಲಿ ರಾಮಸಂದ್ರ ನೈಸ್ ರಸ್ತೆ ಪಕ್ಕದಲ್ಲಿ ಬಿದ್ದಿದೆ ಅಂತಾ ಹೇಳಿದ್ರು. ತಕ್ಷಣ ಸ್ಥಳಕ್ಕೆ ಬಂದ ಕೆಂಗೇರಿ ಪೊಲೀಸರು ಪರಿಶೀಲನೆ ನಡೆಸಿದ್ದು, 25 ರಿಂದ 30 ವರ್ಷದ ಮಹಿಳೆ ಅನ್ನೋದು ಬಿಟ್ರೆ ಬೇರೆ ಏನು ಗೊತ್ತಾಗಿಲ್ಲ. ಯಾರೋ ಕಿರಾತಕರು ಕೊಂದು, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಶವ ಸಿಕ್ಕ 50 ಮೀ. ದೂರದಲ್ಲಿ ನಿರ್ಮಾಣ ಹಂತದ ಪಾಳು ಕಟ್ಟಡ ಇದ್ದು,ಅಲ್ಲಿಯೂ ಸುಟ್ಟ ಕುರುಹು ಸಿಕ್ಕಿವೆ. ಅಲ್ಲೇ ಬೆಂಕಿ ಹಚ್ಚಿ ನಂತರ ಮರದ ಕೆಳಗೆ ಸುಟ್ಟಾಕಿರೋ ಅನುಮಾನವಿದೆ. ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಶಂಕೆಯೂ ವ್ಯಕ್ತವಾಗಿದೆ. ಹೀಗಾಗಿ ಪೊಲೀಸ್ರು ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಸಂಗ್ರಹಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ನಡುವೆ ಕಾಣೆಯಾದವರ ಬಗ್ಗೆಯೂ ಪೊಲೀಸ್ರು ಮಾಹಿತಿ ಕಲೆ ಹಾಕುತ್ತಿದ್ದಾರೆ.
Kshetra Samachara
03/07/2022 09:31 pm