ಬೆಂಗಳೂರು: ಹುಡುಗಿಯರ ಶೋಕಿಗೆ ಮೈತುಂಬ ಸಾಲ ಮಾಡಿಕೊಂಡಿದ್ದ ಆತ ಆ ಸಾಲತೀರಿಸಲು ಅಡ್ಡ ದಾರಿ ಹಿಡಿದು ಉಂಡ ಮನೆಗೆ ಕನ್ನ ಹಾಕಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಚಾಮರಾಜಪೇಟೆಯ ಪ್ಲಾನೆಟ್ ಹೋಲ್ಡಿಂಗ್ಸ್ ಬೆಳ್ಳಿ ಅಂಗಡಿಗೆ ರಾತ್ರೋ ರಾತ್ರಿ ಆರೋಪಿಗಳು ಇಡೀ ಬೆಳ್ಳಿ ಅಂಗಡಿ ದೋಚಿ ಪರಾರಿಯಾಗಿದ್ರು. ಅಂದ ಹಾಗೆ ಪ್ರಕರಣ ಬೆಳಕಿಗೆ ಬಂದ ನಾಲ್ಕು ಗಂಟೆಯಲ್ಲಿ ಚಾಮರಾಜಪೇಟೆ ಪೊಲೀಸ್ರು ಆರೋಪಿಗಳ ಹೆಡೆಮುರಿ ಕಟ್ಟಿದ್ರು.
ಈ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಜೈನ್, ಅಂಗಡಿ ಮಾಲೀಕ ಉತ್ತಮ್ ಜೈನ್‌ನ ನಂಬಿಕಸ್ಥ ಕೆಲಸಗಾರ. ಹಣಕ್ಕಾಗಿ ಅನ್ನ ಹಾಕಿದ ಮನೆಗೆ ಕನ್ನ ಹಾಕಿ ಈಗ ಪೊಲೀಸ್ರ ಅತಿಥಿಯಾಗಿದ್ದಾನೆ. ರಾಜೇಶ್ ಮತ್ತು ಮಧು ಎಂಬ ಈ ಇಬ್ಬರು ಈತನ ಸಹಚರರು. ರಾಹುಲ್ ಕಳೆದ ಮೂರು ವರ್ಷದಿಂದ ಇದೇ ಅಂಗಡಿಯಲ್ಲಿ ಮಾರ್ಕೆಟಿಂಗ್ ಏಜೆಂಟ್ ಆಗಿ ಕೆಲಸ ಮಾಡ್ಕೊಂಡಿದ್ದ. ಬೆಳ್ಳಿ ಗಟ್ಟಿ ಕರಗಿಸಿ ಅಭರಣ ಮಾಡಿ ರಿಟೇಲ್ ಅಂಗಡಿಗೆ ಸಪ್ಲೈ ಮಾಡ್ತಿದ್ದ. ಅದಕ್ಕಾಗಿ ಮಾಲೀಕ ಉತ್ತಮ್ ಈತನಿಗೆ 25 ಸಾವಿರ ಸಂಬಳ ಕೂಡ ನೀಡ್ತಿದ್ರು.
ಅದೇ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದರಿಂದ ಬೆಳ್ಳಿ ಆಭರಣ ಎಲ್ಲಿ ಇಡ್ತಾರೆ, ಹಣ ಎಲ್ಲಿರುತ್ತದೆ ಅಂತ ಎಲ್ಲವನ್ನೂ ಚೆನ್ನಾಗಿಯೇ ತಿಳಿದುಕೊಂಡಿದ್ದ. ಇಲ್ಲಿ ಕೆಲಸ ಮಾಡುತ್ತಲೇ ಈತನು ಎರಡ್ಮೂರು ಕಡೆ ಬಟ್ಟೆ ಅಂಗಡಿ ಓಪನ್ ಮಾಡಿ ನಷ್ಟ ಅನುಭವಿಸಿದ್ದ. ಆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಹುಡುಗರೇ ಈ ರಾಜೇಶ್ ಮತ್ತು ಮಧು. ಅಲ್ಲದೇ ಹುಡುಗಿಯರ ಶೋಕಿ ಬೇರೆ ಇತ್ತು. ವ್ಯವಹಾರದಲ್ಲಿ ನಷ್ಟ ಅನುಭವಿಸಿ ಮಾಲೀಕನ ಇದೇ ಅಂಗಡಿ ದೋಚಿ, 7 ಲಕ್ಷ ನಗದು, ಅಪಾರ ಪ್ರಮಾಣದ ಬೆಳ್ಳಿ ಸಾಮಗ್ರಿಗಳೊಂದಿಗೆ ಪರಾರಿಯಾಗಿದ್ದ.
ಬಟ್ಟೆ ಅಂಗಡಿಯಲ್ಲಿರುವ ವಸ್ತುಗಳನ್ನ ಶಿಫ್ಟ್ ಮಾಡ್ಬೇಕು ಅಂತ ಹುಡುಗರನ್ನ ಕರೆಸಿಕೊಂಡಿದ್ದ. ಅದ್ರಂತೆ ನಾಗರಬಾವಿಯ ಅಂಗಡಿಯಲ್ಲಿದ್ದ ವಸ್ತು ಶಿಫ್ಟ್ ಮಾಡಿ ರಾತ್ರಿ ಆಗ್ತಿದ್ದಂತೆ ಮತ್ತೊಂದು ಅಂಗಡಿ ಇದೆ. ಅದನ್ನು ಶಿಫ್ಟ್ ಮಾಡ್ಬೇಕು ಅಂತಾ ಚಾಮರಾಜಪೇಟೆಯ ಬೃಂದಾವನನಗರದ ಇದೇ ಪ್ಲಾನೆಟ್ ಹೋಲ್ಡಿಂಗ್ಸ್ ಅಂಗಡಿ ಕಡೆ ಕಾರು ತಿರುಗಿಸಿದ್ದ. ಮೊದಲೇ ಈ ಪ್ಲಾನ್ ಅನ್ನ ರಾಜೇಶ್ ಮತ್ತು ಮಧುಗೆ ಹೇಳಿದ್ದ. ಅದ್ರಂತೆ ಸಿಸಿಟಿವಿ ದಿಕ್ಕು ಬದಲಿಸಿದ ರಾಜೇಶ್ ಆ್ಯಕ್ಸಲ್ ಬ್ಲೇಡ್‌ನಿಂದ ಬೀಗ ಕಟ್ ಮಾಡಿ ಬೆಳ್ಳಿ ಮತ್ತು ಹಣ ಕದ್ದು ಪರಾರಿಯಾಗಿದ್ರು.
ತನಿಖೆಗಿಳಿದ ಚಾಮರಾಜಪೇಟೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಚಾಮರಾಜಪೇಟೆ ಠಾಣೆ ಇನ್ಸ್‌ಪೆಕ್ಟರ್ ಎರ್ರಿಸ್ವಾಮಿ ಮತ್ತು ತಂಡ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಮೂರು ಲಕ್ಷ ನಗದು ಹಾಗೂ ಬೆಳ್ಳಿ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
Kshetra Samachara
23/05/2022 08:49 pm