ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಭರದಿಂದ ಸಿದ್ಧತೆ ಆರಂಭಿಸಿದ್ದು, ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿಯೇ ಬಿಜೆಪಿಯ ಜನಸಂಕಲ್ಪ ಯಾತ್ರೆ ಕೂಡ ಮಂಗಳವಾರ ಆರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜಂಟಿಯಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಯಾತ್ರೆ ಸಂಚರಿಸಲಿದೆ. ಮಂಗಳವಾರ ರಾಯಚೂರು ಜಿಲ್ಲೆಯಿಂದ ಆರಂಭಗೊಳ್ಳುವ ಯಾತ್ರೆಯು ಡಿ.25ಕ್ಕೆ ರಾಮನಗರ ಜಿಲ್ಲೆಯಲ್ಲಿ ಅಂತ್ಯವಾಗಲಿದೆ.
ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸಿದೆ. ರಾಜ್ಯದಲ್ಲಿಯೂ ರಾಹುಲ್ ಗಾಂಧಿ ಯಾತ್ರೆ ಭರ್ಜರಿಯಾಗಿ ಸಾಗಿದ್ದು, ಅಭೂತಪೂರ್ವ ಜನಬೆಂಬಲವೂ ವ್ಯಕ್ತವಾಗುತ್ತಿದೆ. ಅದಕ್ಕೆ ಸ್ಪರ್ಧೆಯೊಡ್ಡಲು ಹಾಗೂ ಚುನಾವಣೆಯಲ್ಲಿ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ರಾಜ್ಯ ಪ್ರವಾಸ ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಿರಂತರ ಸಭೆ, ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುವ ಯಾತ್ರೆಯು ಆಡಳಿತಾರೂಢ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರದಲ್ಲಿಯೂ ಸಂಚರಿಸಲಿದ್ದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುವುದು. ಅಲ್ಲದೆ, ಬೃಹತ್ ಸಮಾವೇಶಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಎರಡು ಕ್ಷೇತ್ರಗಳಂತೆ 50ಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಲಿದೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗುವ ಸಂಕಲ್ಪ ಯಾತ್ರೆಯು ದಿನಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಂತೆ ಸಂಚರಿಸಲಿದೆ. ಅಲ್ಲದೆ, ಎಸ್‌ಸಿ ಮೋರ್ಚಾ, ಎಸ್‌ಟಿ ಮೋರ್ಚಾ, ಮಹಿಳಾ ಮೋರ್ಚಾ ಸೇರಿದಂತೆ ಇತರೆ ಮೋರ್ಚಾಗಳ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗಿದೆ.
-ಪ್ರವೀಣ್ ರಾವ್
PublicNext
11/10/2022 08:09 pm