ಹೊಸಕೋಟೆ: ತಪ್ಪನ್ನು ತಿದ್ದಿ, ಬುದ್ಧಿ ಕಲಿಸಬೇಕಾದ ಶಿಕ್ಷಕನೇ ರಾಕ್ಷಸನಾದರೆ!? ಹೌದು... ಹೊಸಕೋಟೆ ತಾಲೂಕು ಚಿಕ್ಕಕೋಲಿಗ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಈಶ್ವರಪ್ಪ ಪೂಜಾರಿ 3ನೇ ತರಗತಿ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಾನೆ! ಎಡ ಮುಂಗೈ ಊದಿಕೊಂಡಿದ್ದರೆ, ಎಡಗಾಲಿನ ತೊಡೆಗೆ ರಕ್ತಹೆಪ್ಪುಗಟ್ಟುವಂತೆ ಹೊಡೆದಿದ್ದಾನೆ! ಪರಿಣಾಮ ವಿದ್ಯಾರ್ಥಿ ನೋವು ತಡೆಯಲಾರದೆ ಆಸ್ಪತ್ರೆ ಪಾಲಾಗಿದ್ದಾನೆ.
ಕನ್ನಡ ದಿನಪತ್ರಿಕೆ ಓದುವಾಗ ತಡವರಿಸಿದ್ದಕ್ಕೆ ವಿದ್ಯಾರ್ಥಿಯ ಕೈ- ಕಾಲಿನ ಮೇಲೆ ಬಾಸುಂಡೆ ಬರುವಂತೆ ಶಿಕ್ಷಕ ಹೊಡೆದಿದ್ದರಿಂದ ಆ ಭಾಗ ಊದಿಕೊಂಡಿವೆ. ನೋವು ಸಹಿಸಿಕೊಳ್ಳಲಾಗದೆ ವಿದ್ಯಾರ್ಥಿ ಜ್ವರದಿಂದ ನರಳಿ, ಬಳಿಕ ಆಸ್ಪತ್ರೆಗೆ ದಾಖಲಾದ ಮೇಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಯ ಎರಡೂ ಕೈಗಳನ್ನು ಹಿಡಿದು ತೊಡೆಗೆ ಮತ್ತು ಕೈಗೆ ಹಿಗ್ಗಾಮುಗ್ಗಾ ಹೊಡೆದ ಪರಿಣಾಮ ವಿದ್ಯಾರ್ಥಿ ಮನೆಗೋಗಿ ಕುಸಿದು ಬಿದ್ದಿದ್ದ. ಆ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸುದ್ದಿ ಹಬ್ಬುತ್ತಿದ್ದಂತೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ವಿವೇಕಾನಂದ ಅವರು ಶಾಲೆಗೆ ಭೇಟಿ ಕೊಟ್ಟು ವಿಚಾರಿಸಿದಾಗ, ಶಿಕ್ಷಕ ಈಶ್ವರಪ್ಪ ಪೂಜಾರಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘನೆ ಅನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಈ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ.
ಹೊಸಕೋಟೆಯ ಚಿಕ್ಕಕೋಲಿಗ ಶಿಕ್ಷಕ ಈಶ್ವರಪ್ಪ ಪೂಜಾರಿ ಜಾನಪದ ಕಲಾವಿದನೂ ಹೌದು. ವಿವಿಧ ಶಾಲೆಗಳ ಮಕ್ಕಳಿಗೆ ಡೊಳ್ಳು, ಕಂಸಾಳೆ ಕಲಿಸುವ ಸಲುವಾಗಿ ಶಾಲೆಗೆ ಸರಿಯಾಗಿ ಬರ್ತಿರಲಿಲ್ಲ ಎಂಬ ಆರೋಪವಿದೆ. ವಾರದಲ್ಲಿ 3 ದಿನ ಶಾಲೆಗೆ ಬರ್ತಿರಲಿಲ್ಲ. ಹಿರಿಯ ವಿದ್ಯಾರ್ಥಿಗಳೇ ಶಾಲೆ ನಿರ್ವಹಿಸಬೇಕಿತ್ತು.
ಜಾತಿಯ ಆಧಾರದ ಮೇರೆಗೆ ಊರಿನ ಜನರನ್ನು, ಶಿಕ್ಷಣ ಇಲಾಖೆ ಮತ್ತು ಮಿನಿಸ್ಟರ್ MTB ನಾಗರಾಜ್ ವರೆಗೂ ಪ್ರಭಾವ ಹೊಂದಿದ್ದ. ಅಮಾನತಿನಿಂದ ಪಾರಾಗಲು ಊರಿನ ಜನ ಮತ್ತು ವಿದ್ಯಾರ್ಥಿಗಳಿಂದ ಶಾಲೆಗೆ ಈಶ್ವರಪ್ಪ ಮೇಷ್ಟ್ರೇ ಬೇಕೆಂದು ಪ್ರತಿಭಟನೆ ಸಹ ಮಾಡಿಸಿದ್ದಾನೆ. ಮಾಡಿದ ತಪ್ಪಿಗಾಗಿ ಇದೀಗ ಅಮಾನತಾಗಿದ್ದಾನೆ.
PublicNext
05/10/2022 09:11 pm