ಬೆಂಗಳೂರು: ಅವ್ರೆಲ್ಲಾ ಒಂದೇ ಪಕ್ಷ, ಒಟ್ಟಾಗಿಯೇ ಇದ್ದವರು. ಕೊರೊನಾ ಕಾಲದಲ್ಲಿ ಫ್ರೀಯಾಗಿ ಹಾಲು ಹಂಚೋ ವಿಚಾರಕ್ಕೆ ಶುರುವಾದ ಗಲಾಟೆ ಇಂದು ಹೆಣ ಬಿದ್ರೆ ಮತ್ತೆ ಕೆಲವರು ಜೈಲು ಸೇರಿದ್ದಾರೆ!
ನಿನ್ನೆ ಬೆಳಿಗ್ಗೆ ನಗರದ ಶೇಷಾದ್ರಿಪುರಂನಲ್ಲಿ ಗಣೇಶ@ ಕುಂದಾಪ್ರಿ ಎಂಬಾತನ ಮೇಲೆ ನಡೆದ ಅಟ್ಯಾಕ್ ಇಡೀ ಏರಿಯಾವನ್ನ ಬೆಚ್ಚಿ ಬೀಳಿಸಿತ್ತು. ಆತನನ್ನ ಆಸ್ಪತ್ರೆಗೆ ಸೇರಿಸಿ ಬದುಕಿಸುವ ಪ್ರಯತ್ನ ಕೂಡ ಮಾಡಲಾಗಿತ್ತು. ಆದರೆ, ಸಂಜೆ ವೇಳೆಗೆ ಚಿಕಿತ್ಸೆ ಫಲ ನೀಡದೆ ಗಣೇಶ್, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
ಈ ಸಂಬಂಧ ಶರತ್ ಕುಮಾರ್, ಜಾನ್, ಸರವಣ, ಸತ್ಯ ಹಾಗೂ ಅಜಿತ್ ಕುಮಾರ್ ಎಂಬ ಐವರನ್ನ ಕೋಲಾರದ ಬಳಿ ಬಂಧಿಸಿ ಕರೆ ತರಲಾಗಿದೆ. ಅಂದ ಹಾಗೆ ಇವರಿಗೆಲ್ಲರಿಗೂ ಪ್ಲಾನಿಂಗ್ ನೀಡಿ ಬೆಂಬಲ ನೀಡಿದ್ದ ಲೇಡಿಯೊಬ್ಬಳಿದ್ದಾಳೆ. ಆ ಮಾಸ್ಟರ್ ಮೈಂಡ್ ಹೆಸರು ಲೀಲಾ.
ಕೊಲೆಯಾದ ಗಣೇಶ ಈ ಹಿಂದೆ ಗಾಂಧಿನಗರ ಕ್ಷೇತ್ರದ ಯೂತ್ ಕಾಂಗ್ರೆಸ್ ಲೀಡರ್ ಆಗಿದ್ದ. ಹಂತಕರು ಮತ್ತು ಕೊಲೆಯಾದ ಗಣೇಶ ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಒಟ್ಟಾಗಿ ದುಡಿದವರು. ಆದ್ರೆ, 2020ರಲ್ಲಿ ಕಿರಿಕ್ ನಡೆದ ಹಿನ್ನಲೆ ಎರಡು ಗುಂಪುಗಳಾಗಿ ಮಾರ್ಪಟ್ಟಿತ್ತು. 2020ರಲ್ಲಿ ಕೋವಿಡ್ ಲಾಕ್ ಡೌನ್ ವೇಳೆ ಬಿಬಿಎಂಪಿ ವತಿಯಿಂದ ಹಾಲು ಹಂಚುವ ಕಾಂಟ್ರಾಕ್ಟ್ ಗಣೇಶನಿಗೆ ನೀಡಲಾಗಿತ್ತು.
ಈ ವೇಳೆ ಅದೇ ಕಾಂಗ್ರೆಸ್ ನ ಮತ್ತೊಬ್ಬ ಲೀಡರ್ ಆಗಿದ್ದ ಲೀಲಾ ಆ್ಯಂಡ್ ಟೀಂ, ಜನರನ್ನ ತಮ್ಮತ್ತ ಸೆಳೆಯಲು ತಮ್ಮ ಪ್ರಾಬಲ್ಯವಿರುವ ಸ್ಲಂಗೆ ಹೆಚ್ಚು ಹಾಲು ವಿತರಣೆಯಾಗಬೇಕೆಂದು ಪಟ್ಟು ಹಿಡಿದಿದ್ರು. ಈ ವೇಳೆ ಗಣೇಶನ ಟೀಂಗೂ ಲೀಲಾ ಟೀಂಗೂ ಕಿರಿಕ್ ನಡೆದಿತ್ತು. ಈ ವಿಚಾರವಾಗಿ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ಕೂಡ ದಾಖಲಾಗಿತ್ತು. ನಂತರದ ದಿನಗಳಲ್ಲಿ ಎರಡೂ ತಂಡ ಒಂದಾಗುವ ಸಲುವಾಗಿ ಸಾಕಷ್ಟು ಬಾರಿ ಸಂಧಾನ ನಡೆದಿತ್ತು. ಅದು ಯಶಸ್ವಿ ಕೂಡ ಆಗಿತ್ತು.
ಯಾವುದಕ್ಕೂ ಇರಲಿ ಎಂದು ಗಣೇಶ, ಮಾರಿ ಪೂಜೆಯ ದಿನ ಹಂತಕರಿಗೆ ಸನ್ಮಾನ ಮಾಡಿ ಹಾರ ಹಾಕಿ ಕಳಿಸಿದ್ದ. ಹಂತಕರ ಟೀಂ ಕೂಡ ಅದನ್ನ ಒಪ್ಪಿಕೊಂಡು ಇನ್ಮುಂದೆ ಒಟ್ಟಾಗಿರೋಣ ಎಂದುಕೊಂಡು ನಗುತ್ತಲೇ ಕೈ ಕುಲುಕಿಕೊಂಡಿದ್ರು. ಆದ್ರೆ, ಇಬ್ಬರ ನಡುವೆ ಮೂರನೆಯವ ಎಂಟ್ರಿಯಾದ್ರೆ ಏನಾಗುತ್ತೋ ಅದೇ ಇಲ್ಲಿ ಕೂಡ ಆಗಿತ್ತು.
ನಿಮಗೆ ಹಾರ ಹಾಕಿದ್ದು ನಿಮ್ಮನ್ನ ಕುರಿ ಮಾಡಲು ಅಷ್ಟೆ. ನಿಮ್ಮನ್ನ ಒಂದಲ್ಲ ಒಂದು ದಿನ ಅವ್ರು ಮುಗಿಸ್ತಾರೆ. ರಾಜಿ ಅಂದ್ರೆ ಏನು ಅಂತ ಗೊತ್ತಲ್ಲ ಎಂದೆಲ್ಲಾ ಕಿವಿ ಊದಿದ್ರು. ಇದನ್ನ ನಂಬಿದ ಹಂತಕರು ಅವ್ನೇನು ಮುಗ್ಸೋದು ನಾವೇ ಮುಗುಸ್ತೀವಿ ಎಂದು ಲೀಲಾ ಆ್ಯಂಡ್ ಟೀಂ ಗಣೇಶನಿಗೆ ಸ್ಕೆಚ್ ಹಾಕಿದ್ದಾರೆ. ಆತನ ಚಲನವಲನದ ಮಾಹಿತಿ ಕಲೆ ಹಾಕಿ ನಟರಾಜ ಥಿಯೇಟರ್ ಬಳಿ ಬರುತ್ತಿದ್ದಂತೆ ಮುಸುಕುಧಾರಿಯಾಗಿ ಬಂದ ಹಂತಕರು ಗಣೇಶ್ ಮೇಲೆ ಅಟ್ಯಾಕ್ ಮಾಡಿದ್ರು.
ಇನ್ನು ಹೆಸರಿಗಾಗಿ, ದ್ವೇಷಕ್ಕಾಗಿ ಹತ್ಯೆ ನಡೆಸಿದ್ದು ಸಾಬೀತಾಗಿದೆ. ಸದ್ಯ ಪ್ರಮುಖ ಆರೋಪಿ ಪ್ಲಾನರ್ ಲೀಲಾ ಪರಾರಿಯಾಗಿದ್ದು, ಆಕೆಯ ಹುಡುಕಾಟ ಮುಂದುವರೆದಿದೆ.
- ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
14/09/2022 04:32 pm