ದೊಡ್ಡಬಳ್ಳಾಪುರ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲುಗಣಿಗಾರಿಕೆ ಕೇಂದ್ರದ ಮೇಲೆ ತಹಶೀಲ್ದಾರ್ ಮೋಹನಕುಮಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಈ ವೇಳೆ ಕಲ್ಲು ಗಣಿಗಾರಿಕೆಗೆ ಬಳಸಲಾಗಿದ್ದ ಕ್ರೇನ್, ಟ್ರಾಕ್ಟರ್, ಬೈಕ್ ಜಪ್ತಿ ಮಾಡಿ, ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಸರ್ವೆ ನಂಬರ್ 67 ರಲ್ಲಿ ಹಲವು ದಿನಗಳಿಂದ ಅಕ್ರಮ ಕಲ್ಲುಗಾಣಿಗಾರಿಕೆ ನಡೆಯುತ್ತಿತ್ತು, ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡುತ್ತಿದಂತೆ, ಕೆಲಸ ಮಾಡುತ್ತಿದ್ದ ಕೆಲಸಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾಗ ವಿನೋದ ಎಂಬುವರು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದೆ.
ಸ್ಥಳಕ್ಕೆ ಧಾವಿಸಿದ ಕಲ್ಲು ಗಣಿಗಾರಿಕೆ ಮಾಲೀಕ ವಿನೋದ್ ಸಂಬಂಧಪಟ್ಟ ದಾಖಲೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮೋಹನಕುಮಾರಿ ಸರಕಾರಿ ಜಮೀನಿನಲ್ಲಿದ್ದ ಬಂಡೆಗಳನ್ನು ಹೊಡೆದು ವಾಣಿಜ್ಯ ಬಳಕೆಗೆ ಬಳಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ನಿಮ್ಮ ಜಮೀನಿನ ದಾಖಲೆ ನೀಡಿ, ಬಂಡೆ ಹೊಡೆಯಲು ಅನುಮತಿ ನೀಡಿದವರು ಯಾರು ಎಲ್ಲಾ ಸೂಕ್ತ ದಾಖಲೆಗಳನ್ನು ಹಾಜರಿಪಡಿಸುವಂತೆ ತಿಳಿಸಿದ್ದಾರೆ. ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
PublicNext
07/10/2022 07:46 pm