ಬೆಂಗಳೂರು : ರೈಲ್ವೇ ತಡೆಗೋಡೆಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು, ರಾತ್ರಿ ವೇಳೆ ದರೋಡೆಕೋರರ ದಾಳಿಯಿಂದ ಪಾರಾಗುವ ಯತ್ನದಲ್ಲಿ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಅಕ್ಟೋಬರ್ 25ರಂದು ರಾತ್ರಿ ಎಚ್ಎಎಲ್ ಸಂಚಾರಿ ಠಾಣೆ ವ್ಯಾಪ್ತಿಯ ಕಾಮಧೇನು ಸ್ವಾಸ್ಥ್ಯ ಕೇಂದ್ರದ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ರೋಹನ್ ಜಯಕೃಷ್ಣನ್ (21) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಮಮೂರ್ತಿ ನಗರದ ನಿವಾಸಿಯಾಗಿದ್ದ ರೋಹನ್, ಅಕ್ಟೋಬರ್ 25ರಂದು ರಾತ್ರಿ ಸೇಲಂ ಬ್ರಿಡ್ಜ್ ಕಡೆ ಹೊರಟಿದ್ದ. ಬೆಳಗ್ಗಿನ ಜಾವ 3:30ರ ಸುಮಾರಿಗೆ ಅತಿ ವೇಗವಾಗಿ ಬಂದ ರೋಹನ್ ಚಲಾಯಿಸುತ್ತಿದ್ದ ಬೈಕ್ ರಸ್ತೆಯ ಕೊನೆಯಲ್ಲಿದ್ದ ರಬ್ಬಿಣದ ಗ್ರಿಲ್'ಗಳನ್ನೊಳಗೊಂಡ ರೈಲ್ವೇ ತಡೆಗೋಡೆಗೆ ಡಿಕ್ಕಿಯಾಗಿದೆ. ಪರಿಣಾಮ ರೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ ಪೊಲೀಸರು ಅಜಾಗರೂಕ ಚಾಲನೆಯಿಂದ ಸಾವು ಸಂಭವಿಸಿರುವುದಾಗಿ ಪ್ರಕರಣ ದಾಖಲಿಸಿದ್ದರು.
ಆದರೆ, ರೋಹನ್ ಬೈಕ್ ಅಪಘಾತವಾದ ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಸ್ಥಳಕ್ಕೆ ಬಂದಿರುವ ಮೂವರು, ತಕ್ಷಣ ಯೂಟರ್ನ್ ಪಡೆದು ವಾಪಾಸಾಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮೃತನ ಕುಟುಂಬಸ್ಥರು, ಈ ಕುರಿತು ತನಿಖೆ ನಡೆಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
PublicNext
03/11/2024 01:51 pm