ದೊಡ್ಡಬಳ್ಳಾಪುರ: ಕೃಷಿ ಮಾಡಲು ನೀರು ಬೇಕು.ಬೋರ್ ವೆಲ್ ನಿಂದ ನೀರು ತೆಗೆಯಲು ವಿದ್ಯುತ್ ಬೇಕು.ಆದರೆ ಯಾವುದೇ ಮುನ್ಸೂಚನೆ ನೀಡದ ಬೆಸ್ಕಾಂ ಇಲಾಖೆ ಕಳೆದ ಮೂರು ದಿನಗಳಿಂದ 2 ಪೇಸ್ ವಿದ್ಯುತ್ ಸರಬರಾಜು ನಿಲ್ಲಿಸಿದ್ದು, ನೀರಿಲ್ಲದೆ ಬೆಳೆ ಒಣಗುತ್ತಿರುವುದನ್ನ ನೋಡಿ ರೈತ ಕಣ್ಣೀರು ಹಾಕಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರಿನ ಹನುಮಂತರಾಜು ವೃತ್ತಿಯಲ್ಲಿ ವಕೀಲರಾದ್ರು. ಹಿರಿಯರಿಂದ ಬಂದ ಕೃಷಿಯನ್ನ ಮುಂದುವರೆಸಿಕೊಂಡಿದ್ದಾರೆ. ತಮ್ಮ 12 ಎಕರೆ ಕೃಷಿ ಜಮೀನಿನಲ್ಲಿ 6 ಎಕರೆ ದವನ, 6 ಎಕರೆ ಬಾಳೆಯನ್ನ ಬೆಳೆಯುತ್ತಿದ್ದಾರೆ. ಆದರೆ ಬೆಸ್ಕಾಂ ಪ್ರತಿದಿನ ಕೊಡುವ 6 ಗಂಟೆಗಳ 3 ಪೇಸ್ ವಿದ್ಯುತ್ ಸರಬರಾಜು ಸರಿಯಾಗಿಯೇ ಇರುವುದಿಲ್ಲ. ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೆ ಇವರ 12 ಎಕರೆಯಲ್ಲಿ ಬೆಳೆದ ಬಾಳೆ ಮತ್ತು ದವನ ಒಣಗುತ್ತಿದೆ. ಇವರ ಜೊತೆಗೆ ಹಲವು ರೈತರು ಸಹ ಬೆಸ್ಕಾಂ ಅಧಿಕಾರಿಗಳ ಧೋರಣೆಯಿಂದ ಬೆಳೆಗಳನ್ನ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಬೆಸ್ಕಾಂ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ರೈತ ಹನುಮಂತರಾಜು ವಿಷವನ್ನಾದ್ರು ಕೊಡಿ ಕುಡಿದು ಸಾಯುವುದ್ದಾಗಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಬೆಸ್ಕಾಂ ಅಧಿಕಾರಿಗಳ ವರ್ತನೆಗೆ ಬೇಸತ್ತ ರೈತರು ದೊಡ್ಡಬಳ್ಳಾಪುರದ ಬೆಸ್ಕಾಂ ಕಚೇರಿ ಜಮಾಯಿಸಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಪಕ್ಕದ ಬೆಂಗಳೂರು ಉತ್ತರ ತಾಲೂಕಿನಲ್ಲಿ 24 ಗಂಟೆ ವಿದ್ಯುತ್ ಸರಬರಾಜು ಇರುವಾಗ ನಮಗ್ಯಾಕೆ 24 ಗಂಟೆ ವಿದ್ಯುತ್ ಇಲ್ಲ. ಬೆಸ್ಕಾಂ ಅಧಿಕಾರಿಗಳು ಮೊದಲಿನಂತೆ ವಿದ್ಯುತ್ ಸರಬರಾಜು ಮಾಡದಿದ್ದಲ್ಲಿ ಕಚೇರಿ ಬೀಗ ಜಡಿದು ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
Kshetra Samachara
13/02/2022 08:58 am