ಬಾಗಲಕೋಟೆ: ದಿನ ಬೆಳಗಾದರೆ ಹಿಂದುತ್ವ, ಹಿಂದುಗಳ ರಕ್ಷಣೆ ಬಗೆಗೆ ಮಾತನಾಡುವ ಸರ್ಕಾರದ ಪಾಲಿಗೆ ಹಿಂದು ಜಾಗರಣ ವೇದಿಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ಕೆರೂರನಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಅಮಾಯಕ ಹಿಂದು ಯುವಕರ ಬಂಧಿಸಿ ಪೊಲೀಸರು ಚಿತ್ರಹಿಂಸೆ ನೀಡಿರುವ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಮಾಯಕ ಹಿಂದು ಯುವಕರಿಗೆ ಚಿತ್ರಹಿಂಸೆ ನೀಡಿರುವ ಪೊಲೀಸರ ವಿರುದ್ಧ ಸರ್ಕಾರ ಮೀನಮೇಷ ಮಾಡುತ್ತಿರುವ ನೀತಿಯನ್ನು ಖಂಡಿಸಿ ಹಿಂಜಾವೇ ಮುಖಂಡರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಕಳೆದೊಂದು ತಿಂಗಳು ಹಿಂದೆ ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕೆರೂರ ಚಲೋ ನಡೆಸಿ, ಬಹುದೊಡ್ಡ ಸಮಾವೇಶವನ್ನು ಹಿಂಜಾವೇ ನಡೆಸಿತ್ತು. ಆ ವೇಳೆ ಪೊಲೀಸರ ವಿರುದ್ಧ ಕ್ರಮ ಆಗದೇ ಹೋದಲ್ಲಿ ಅಹೋರಾತ್ರಿ ಧರಣಿಯ ಎಚ್ಚರಿಕೆ ನೀಡಿದ್ದ ಅದು, ಇದೀಗ ಅ.10 ರಂದು ಜಗದೀಶ್ ಕಾರಂತರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಧರಣಿಗೆ ಸಜ್ಜಾಗಿದೆ.
ರಾಜ್ಯ ಸರ್ಕಾರದಲ್ಲಿ ಹಿಂದುತ್ವ, ಹಿಂದುಗಳ ಪರ ಮಾತನಾಡುವವರು ರಾಜೀನಾಮೆ ನೀಡಿ ನ್ಯಾಯಕ್ಕಾಗಿ ತಮ್ಮೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸಂಘಟನೆ ಕರೆ ಕೊಟ್ಟಿದೆ. ಜತೆಗೆ ಹಿಂದುತ್ವದ ಬಗೆಗೆ ಹೇಳಿಕೊಳ್ಳುವ ಸರ್ಕಾರ ಅಮಾಯಕ ಯುವಕರಿಗೆ ನ್ಯಾಯ ಕೊಡುವಲ್ಲಿ ಏಕೆ ಹಿಂದೇಟು ಹಾಕುತ್ತಿದೆ ಎನ್ನುವುದು ಸಂಘಟನೆಯ ಪ್ರಶ್ನೆ ಆಗಿದೆ.
ಸರ್ಕಾರ ಈ ವಿಷಯದಲ್ಲಿ ಪ್ರತಿಪಕ್ಷದ ನಾಯಕರ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಜನತಾ ಪರಿವಾರದ ನಾಯಕರು ಒಂದಾಗಿದ್ದಾರೆ ಎಂದು ಹೇಳುವ ಮೂಲಕ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಾದಾಮಿ ಶಾಸಕ ಸಿದ್ಧರಾಮಯ್ಯ ಒಟ್ಟಾಗಿದ್ದಾರೆ ಎನ್ನುವ ಗಂಭೀರ ಆರೋಪ ಸಂಘಟನೆಯದ್ದಾಗಿದೆ.
ಒಟ್ಟಾರೆ ಹಿಂದುತ್ವ ಸರ್ಕಾರದ ವಿರುದ್ದ ಇದೀಗ ಹಿಂದು ಸಂಘಟನೆ ಸಿಡಿದೆದ್ದಿದೆ. ಚುನಾವಣೆ ಹತ್ತಿರದಲ್ಲಿರುವಾಗ ಸರ್ಕಾರ ಮತ್ತು ಹಿಂದು ಸಂಘಟನೆ ನಡುವೆ ನೀ ಕೊಡೆ, ನಾ ಬಿಡೆ ಎನ್ನುವ ಜೋತು ಬಿದ್ದಿವೆ. ಹಾಗಾಗಿ ಕೆರೂರನ ಅಮಾಯಕ ಹಿಂದು ಯುವಕರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗುವುದೋ ಹೇಗೆ ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿ ನಿಂತಿದೆ.
Kshetra Samachara
07/10/2022 01:01 pm