ಕಾರವಾರ: ಗೋವಾದಲ್ಲಿ ನಿನ್ನೆ ನಡೆದ ಭೀಕರ ಅಪಘಾತದಲ್ಲಿ ಕಾರವಾರ ಮೂಲದ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕಾರವಾರ ತಾಲೂಕಿನ ಮಾಜಾಳಿ ಮೂಲದವರಾಗಿದ್ದು, ಸದ್ಯ ವಾಸ್ಕೋ ನಿವಾಸಿಗಳಾಗಿದ್ದ ಉಲ್ಲಾಸ ನಾಗೇಕರ್, ಅವರ ಪತ್ನಿ ವೀಣಾ ನಾಗೇಕರ್ ಹಾಗೂ ಅವರ ಪುತ್ರ ಹರೀಶ್ ನಾಗೇಕರ್ ಸಾವನ್ನಪ್ಪಿದ್ದಾರೆ.
ಉಲ್ಲಾಸ್ ಸೇರಿದಂತೆ ಅವರ ಕುಟುಂಬದ ಒಟ್ಟು ಎಂಟು ಸದಸ್ಯರು ಕಾರಿನಲ್ಲಿ ವಾಸ್ಕೋದಿಂದ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಿಯ ದರ್ಶನ ಮಾಡಿಕೊಂಡು, ವಾಪಸ್ಸು ವಾಸ್ಕೋಗೆ ತೆರಳುತ್ತಿದ್ದರು. ಈ ವೇಳೆ ಗೋವಾದ ಕಾಣಕೋಣದ ಮನೋಹರ್ ಪರ್ರೀಕರ್ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನಲ್ಲಿ ಭೀಕರ ಅಪಘಾತ ನಡೆದಿದೆ. ಮಡ್ಗಾಂವ್‌ನಿಂದ ಅತಿ ವೇಗದಲ್ಲಿ ಬಂದ ಕಾರೊಂದು ಡಿವೈಡರ್‌ಗೆ ಗುದ್ದಿ, ಹಾರಿ ಬಲ ಭಾಗದಲ್ಲಿ ಬರುತ್ತಿದ್ದ ಉಲ್ಲಾಸ್ ಅವರ ಕುಟುಂಬವಿದ್ದ ಕಾರಿಗೆ ಎದುರಿನಿಂದ ಡಿಕ್ಕಿಯಾಗಿದೆ. ಅಷ್ಟೇ ಅಲ್ಲದೇ, ಅಲ್ಲೇ ಚಲಿಸುತ್ತಿದ್ದ ಸ್ಕೂಟರ್ ವೊಂದಕ್ಕೂ ಬಡಿದಿದೆ.
ಈ ಭೀಕರ ಅಪಘಾತದಲ್ಲಿ ಉಲ್ಲಾಸ್ ಅವರ ಕುಟುಂಬದ ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸ್ಕೂಟರ್ ಸವಾರನಿಗೂ ಗಾಯಗಳಾಗಿವೆ.
PublicNext
08/09/2022 11:15 am