ಯಾದಗಿರಿ: ಜಿಲ್ಲೆಯ ಶಹಾಪುರ ನಗರದ ಎಸ್ ಬಿಸಿ ಕಾಲುವೆಯಲ್ಲಿ ಈಜಲು ಹೋಗಿ ಕಾಲೇಜು ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಶಹಾಪುರ ತಾಲೂಕಿನ ಬೇವಿನಹಳ್ಳಿ (ಜೆ) ಹತ್ತಿರದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಹುಲಕಲ್ ಗ್ರಾಮದ ನಿಂಗಪ್ಪ ತಂದೆ ಬಸವರಾಜ (18) ನಾಪತ್ತೆಯಾದ ಯುವಕ ಎಂದು ತಿಳಿದು ಬಂದಿದೆ.
10 ವಿದ್ಯಾರ್ಥಿಗಳು ಶಾಲೆಯ ಕಾಂಪೌಂಡ್ ಜಿಗಿದು ಈಜಾಡಲು ಕಾಲುವೆಗೆ ಹೊಗಿದ್ದು, ನೀರಿನ ರಬಸಕ್ಕೆ ವಿದ್ಯಾರ್ಥಿ ನಿಂಗಪ್ಪ ಕೊಚ್ಚಿ ಹೊಗಿದ್ದಾನೆ ಎಂದು ಜೊತೆಗಿದ್ದ ವಿದ್ಯಾರ್ಥಿಗಳು ಶಿಕ್ಷಕರಿಗೆ ತಿಳಿಸಿದ್ದಾರೆ. ಇನ್ನು ಶಹಾಪುರ ಪೊಲೀಸ್ ಠಾಣೆ ಎದುರು ದಲಿತ ಸೇನೆ ಯಾದಗಿರಿ ಜಿಲ್ಲಾ ಸಮಿತಿ ಹಾಗೂ ಕುಟುಂಬಸ್ಥರು ರಾತ್ರಿಯಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಶಾಲೆಯ ಆಡಳಿತದ ವೈಫಲ್ಯದಿಂದ ನೀರಿನಲ್ಲಿ ಕೊಚ್ಚಿ ವಿದ್ಯಾರ್ಥಿ ಮೃತಾಪಟ್ಟಿದ್ದಾನೆ ಎಂದು ಆರೋಪಿಸಿದರು.
ಅಲ್ಲದೆ ಯುವಕನ ಸಾವಿಗೆ ಕಾರಣರಾದ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರು, ಹಾಗೂ ಹಾಸ್ಟೆಲ್ ವಾರ್ಡನ್ ಇವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕು. ಜೊತೆಗೆ ಯುವಕನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಂಗಪ್ಪ ನಾಟೇಕರ್ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಸುದ್ದಿ ತಿಳಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಯುವಕನ ಪತ್ತೆಗಾಗಿ ಶಹಾಪುರ ಪೊಲೀಸರುಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
09/01/2022 05:39 pm