ಮಂಡ್ಯ: ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಕೆಂಪನಕೊಪ್ಪಲು ಗೇಟ್ ಸಮೀಪದ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದ ಸಂಗಮ್ಮ(55) ಹಾಗೂ ದಂಪತಿಯಾದ ಶ್ರೀಜಾ(30) ಮತ್ತು ಸುದೀಪ್(35), ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿದ್ದ ಮತ್ತೊಬ್ಬ 18 ವರ್ಷದ ಯುವತಿ ತೀವ್ರ ಗಾಯಗಳಾಗಿದ್ದು ಬಿ.ಜಿ.ನಗರದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಬಸ್ನಲ್ಲಿದ್ದ ಚಾಲಕ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ.
ಮೃತರಾದ ಸುದೀಪ್ ಹಾಗೂ ಶ್ರೀಜಾ ಡಿ.11ರಂದು ಮದುವೆಯಾಗಿದ್ದರು. ಮದುವೆಯಾಗಿ ಇನ್ನೂ ಒಂದು ತಿಂಗಳು ಕೂಡ ಆಗಿರಲಿಲ್ಲ. ಬೆಂಗಳೂರಿನ ಬ್ಯಾಂಕ್ವೊಂದರಲ್ಲಿ ಮ್ಯಾನೇಜರ್ ಆಗಿದ್ದ ಸುದೀಪ್ ದಂಪತಿ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಅಮಾವಾಸ್ಯೆ ಪೂಜೆಗಾಗಿ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿ ವಾಪಸ್ ಬರುತ್ತಿದ್ದ ನೂತನ ದಂಪತಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಬಸ್ ಹಾಗೂ ಕಾರು ಅತಿ ವೇಗದಲ್ಲಿದ್ದ ಕಾರಣ ಅಪಘಾತ ನಡೆದಿದೆ ಎನ್ನಲಾಗಿದೆ.
PublicNext
03/01/2022 10:51 am