ಚಿತ್ರದುರ್ಗ : ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಯಿತ್ರಿ ಜಲಾಶಯ ತುಂಬಿ ಶನಿವಾರ ಕೋಡಿ ಬಿದ್ದಿತ್ತು. ಕೋಡಿ ಬಿದ್ದು ಹರಿಯುತ್ತಿರುವ ನೀರಿನಲ್ಲಿ ಈಜಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದ್ದು ನಾಲ್ಕು ತಾಸುಗಳ ಹುಡುಕಾಟ ನಡೆಸಿದ ಅಗ್ನಿ ಶಾಮಕ ಸಿಬ್ಬಂದಿ ಮೃತ ದೇಹವನ್ನು ನೀರಿನಿಂದ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೃತನನ್ನು ಜೆಜೆ ಹಳ್ಳಿಯ ಕೆ.ಎಚ್. ರಂಗನಾಥ್ ಬಡಾವಣೆಯ ಸಲ್ಮಾನ್ (24) ವರ್ಷ ಎಂದು ಗುರುತಿಸಲಾಗಿದೆ.
ಗಾಯಿತ್ರಿ ಜಲಾಶಯ 2017 ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಎರಡು ಬಾರಿ ತುಂಬಿ ಕೋಡಿ ಬಿದ್ದಿತ್ತು. ನಂತರ 4 ವರ್ಷಗಳ ಬಳಿಕ ಡ್ಯಾಂ ತುಂಬಿ ಕೋಡಿ ಬಿದ್ದು ಹರಿಯುತ್ತಿತ್ತು. ಭಾನುವಾರ ಜಲಾಶಯ ನೋಡಲು ಹೋದ ಯುವಕ ಕೋಡಿ ಬಿದ್ದ ನೀರಿನಲ್ಲಿ ಈಜಲು ಹೋಗಿದ್ದ, ನೀರು ರಭಸವಾಗಿ ಹರಿಯುತ್ತಿದ್ದರಿಂದ ನೀರಿನ ಸೆಳೆತಕ್ಕೆ ಯುವಕ ಕಣ್ಮರೆಯಾಗಿ ಮೃತಪಟ್ಟಿದ್ದ ಆದರೆ ಮೃತ ದೇಹ ಸಿಕ್ಕಿರಲಿಲ್ಲ.
ವಿಷಯ ತಿಳಿದ ತಕ್ಷಣ ಪಿಎಸ್ಐ ಡಿಜೆ. ಪರಮೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹ ಹೊರ ತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದರು. ಸುಮಾರು ನಾಲ್ಕು ತಾಸುಗಳ ನಂತರ ಮೃತ ದೇಹವು ಪತ್ತೆಯಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿಯು ಹುಡುಕಿ ಹೊರಗೆ ತೆಗೆದಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
PublicNext
21/11/2021 07:00 pm