ಹಾವೇರಿ : ಅದು ಸಾವಿರಾರು ಜನರಿಗೆ ತರಕಾರಿ ಒದಗಿಸುವ ಮಾರುಕಟ್ಟೆ. ನೂರಾರು ಕುಟುಂಬದ ಹಸಿವನ್ನು ನೀಗಿಸುವ ಮಾರಾಟ ಕೇಂದ್ರ. ಏಕಾಏಕಿ ಅಗ್ನಿಗೆ ಆಹುತಿಯಾಗಿದೆ. ಆದರೆ ಈ ಅಗ್ನಿ ಅವಘಡದ ಹಿಂದೆ ದುಷ್ಕರ್ಮಿಗಳ ಕೈವಾಡ ಇರುವುದು ಸ್ಪಷ್ಟವಾಗಿದೆ. ಹಾಗಿದ್ದರೇ ಯಾವುದು ಆ ಮಾರುಕಟ್ಟೆ ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಇಲ್ಲಿದೆ ನೋಡಿ ರೋಚಕ ಸ್ಟೋರಿ..
ಹೀಗೆ ಧಗ.. ಧಗ... ಉರಿಯುತ್ತಿರುವ ಜ್ವಾಲೆ...ಅಯ್ಯೋ ನನ್ನ ಅಂಗಡಿ...ಕಾಪಾಡಿ...ಅಯ್ಯೋ ದೇವರೇ ಎಂದು ಗೊಗರೆಯುವ ಧ್ವನಿ ಇದಕ್ಕೆಲ್ಲ ಸಾಕ್ಷಿಯಾಗಿದ್ದೇ ಹಾವೇರಿ ಜಿಲ್ಲೆಯ ಅತಿದೊಡ್ಡ ತರಕಾರಿ ಮಾರುಕಟ್ಟೆ ಎಂದೇ ಖ್ಯಾತಿ ಪಡೆದ ರಾಣೆಬೆನ್ನೂರಿನ ತರಕಾರಿ ಮಾರುಕಟ್ಟೆ. ಹೌದು..ಯಾರೋ ದುಷ್ಕರ್ಮಿಗಳು ಬೆಳ್ಳಂಬೆಳಿಗ್ಗೆ ತರಕಾರಿ ಮಾರುಕಟ್ಟೆಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿರುವ ಹಲವಾರು ಅಂಗಡಿ ಮುಂಗಟ್ಟುಗಳು ಬೆಂಕಿಗೆ ಆಹುತಿಯಾಗಿದ್ದು, ಮಾರಾಟಕ್ಕೆಂದೆ ತಂದಿದ್ದ ತರಕಾರಿ ಭಸ್ಮವಾಗಿದ್ದು, ವ್ಯಾಪಾರಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದುಷ್ಪರಿಣಾಮಗಳ ಕೌರ್ಯಕ್ಕೆ ಬಡವರ ಶ್ರಮ ಬೆಂಕಿಯಲ್ಲಿ ಕರಕಲ್ಲಾಗಿದೆ..
ಇನ್ನೂ ಮಾರುಕಟ್ಟೆಗೆ ಬೆಂಕಿ ಹಚ್ಚಿದ ಪರಿಣಾಮ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ದುರ್ಗ ತರಕಾರಿ ಮಾರುಕಟ್ಟೆಯ ಸುಮಾರು 50 ಕ್ಕೂ ಹೆಚ್ಚು ತರಕಾರಿ ಅಂಗಡಿಗಳು ಹಾಗೂ ಕಿರಾಣಿ ಅಂಗಡಿಗಳು ನಾಶವಾಗಿವೆ. ಬೆಳಗಿನ ಜಾವ ಬೆಂಕಿ ಹಚ್ಚಿದ ದುಷ್ಕರ್ಮಿಗಳು ಕೌರ್ಯ ಮೆರೆದಿರುವುದು ಮನುಕುಲದ ಮುಖಕ್ಕೆ ಮಸಿ ಬಳಿಯುವಂತಾಗಿದೆ. ಹಲವಾರು ಕಿರಾಣಿ ಅಂಗಡಿಗಳು ಸಹ ಸುಟ್ಟು ಭಸ್ಮವಾಗಿದ್ದು, ಈ ಕುರಿತು ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಒಪ್ಪತ್ತಿನ ಗಂಜಿಯನ್ನು ನಂಬಿಕೊಂಡಿದ್ದವರು ಅನ್ನದ ತಾಟನ್ನು ಒದ್ದಂತಾಗಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ. ತಿನ್ನುವ ಅನ್ನವನ್ನು ಹಾಳು ಮಾಡಿದ ಹಾಳು ಮನಸ್ಸಿಗೆ ಇರಲಿ ಒಂದು ದಿಕ್ಕಾರ...
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್...!
PublicNext
20/09/2021 06:33 pm