ಹೈದರಾಬಾದ್: ರಸ್ತೆಯಲ್ಲಿ ಓಡಾಡುವಾಗ ಮೈಯಲ್ಲಾ ಕಣ್ಣಾಗಿರಬೇಕು ಕೊಂಚ ಯಾಮಾರಿದರೂ ಯಮಪೂರಿಗೆ ಹಾರಿತೋರಿಸಲು ಜನ ಸಚ್ಚಾಗಿರುತ್ತಾರೆ.ಅದರಲ್ಲೂ ಮಕ್ಕಳು ಮರಿ ಸಮೇತ ರಸ್ತೆಗಿಳಿದಾಗ ತುಸು ಜಾಸ್ತಿಯೇ ಜಾಗೃತಿ ವಹಿಸಬೇಕು ಸದ್ಯ ಇಲ್ಲೊಂದು ಘಟನೆಯಲ್ಲಿ ರಸ್ತೆ ದಾಟಲು ಓಡಿ ಬಂದ ಬಾಲಕಿಯೋರ್ವಳಿಗೆ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದು ಪರಾರಿಯಾಗಿದ್ದನು.
ಸದ್ಯ ಈ ಸವಾರನ ಪತ್ತೆ ಸಹಕರಿಸಿದ್ದು ಸಾಮಾಜಿಕ ಜಾಲತಾಣ..
ಜನವರಿ 24ರಂದು ಹೈದರಾಬಾದ್ ನ ಬಲ್ಕಂಪೇಟೆಯಲ್ಲಿರುವ ಯಲ್ಲಮ್ಮ ದೇವಸ್ಥಾನದ ಬಳಿ ಬೈಕ್ ನಲ್ಲಿ ವೇಗವಾಗಿ ಬಂದ ಮೂವರು ಹುಡುಗರು ಪುಟ್ಟ ಬಾಲಕಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಕಾಲ್ಕಿತ್ತಿದ್ದರು. ಬಾಲಕಿಯ ಕಾಲಿಗೆ ಗಂಭೀರವಾದ ಗಾಯವಾಗಿತ್ತು. ಆದರೆ, ಆರೋಪಿಗಳ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಇದೀಗ ನೆಟ್ಟಿಗರ ಸಹಾಯದಿಂದ ಘಟನೆ ನಡೆದ 13 ದಿನಗಳ ಬಳಿಕ ಹಿಟ್ ಆ್ಯಂಡ್ ರನ್ ಮಾಡಿದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರಂಭದಲ್ಲಿ ಪೊಲೀಸ್ ತನಿಖೆ ತುಂಬಾ ಕಷ್ಟವಾಯಿತು. ಇದಾದ ಬಳಿಕ ಏನಾದರೂ ಸುಳಿವು ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಆರೋಪಿಗಳ ಫೋಟೋವನ್ನು ಎಸ್ ಆರ್ ನಗರ ಪೊಲೀಸರು ಫೇಸ್ ಬುಕ್ ಮತ್ತು ವಾಟ್ಸ್ ಆ್ಯಪ್ ನಂತಹ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಪೋಸ್ಟ್ ಮಾಡಿದರು. ನಿರ್ಲಕ್ಷ್ಯ ಮತ್ತು ವೇಗದ ಚಾಲನೆ ಮಾಡಿ ಬಲ್ಕಂಪೇಟೆಯಲ್ಲಿ ಪುಟ್ಟ ಬಾಲಕಿಗೆ ಡಿಕ್ಕಿ ಹೊಡೆದು ಆಕೆಯ ಕಾಲಿಗೆ ಗಾಯ ಮಾಡಿರುವ ಆರೋಪಿಗಳ ಗುರುತನ್ನು ದಯವಿಟ್ಟು ಪತ್ತೆ ಹಚ್ಚಿ. ಗೊತ್ತಾದಲ್ಲಿ ಎಸ್ ಆರ್ ನಗರ ಪೊಲೀಸರಿಗೆ ತಿಳಿಸಿ ಎಂದು ಮನವಿ ಮಾಡಿದ್ದರು.
ಇದನ್ನು ನೋಡಿ ಮಾಹಿತಿದಾರರು ಮತ್ತು ನೆಟ್ಟಿಗರು ಮೂವರು ಆರೋಪಿಗಳನ್ನು ಪತ್ತೆಹಚ್ಚಿ, ಅವರು ಎಲ್ಲಿರುತ್ತಾರೆಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿದರು. ಈ ಬಗ್ಗೆ ಮಾತನಾಡಿರುವ ಸಬ್ ಇನ್ಸ್ಪೆಕ್ಟರ್ ಭಾಸ್ಕರ್ ರಾವ್, ಫೋಟೋಗಳನ್ನು ನಮ್ಮ ಮಾಹಿತಿದಾರರಿಗೆ ಕಳುಹಿಸಿದೆವು ಮತ್ತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದೆವು. ರೆಹಮತ್ ನಗರದ ನಿವಾಸಿಯೊಬ್ಬರು ಮೂವರು ಆರೋಪಿಗಳನ್ನು ಪತ್ತೆಹಚ್ಚಿದರು. ಮೂವರು ಸಹ ಅಪ್ರಾಪ್ತರು ಎಂದು ತಿಳಿಸಿದ್ದಾರೆ.
ಸಾಕ್ಷ್ಯಾಧಾರ ಮೇಲೆ ಫೆ. 6ರಂದು ಆರೋಪಿಗಳನ್ನು ನಮ್ಮ ವಶಕ್ಕೆ ಪಡೆದುಕೊಂಡಿದ್ದೇವೆ. ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
PublicNext
07/02/2021 11:48 am