ರಾಂಚಿ: ಪತ್ನಿಯ ಅನುಮತಿ ಇಲ್ಲದೆ ಅಥವಾ ಆಕೆಗೆ ಗೊತ್ತಿಲ್ಲದೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದರೆ ಪತಿಯನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಆದೇಶ ನೀಡಿದೆ.
ಲೈಂಗಿಕ ಸಂಭೋಗ/ಅಸ್ವಾಭಾವಿಕ ಸಂಭೋಗದಲ್ಲಿ ಹೆಂಡತಿಯ ‘ಸಮ್ಮತಿ’ ಹೊಂದಿರುವುದು ಅತ್ಯಲ್ಪ ಎಂದು ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಅವರ ಏಕ ಪೀಠವು ಹೇಳಿದೆ ಎಂದು ವರದಿಯಾಗಿದೆ. ‘ಒಪ್ಪಂದದೊಂದಿಗೆ ಅಥವಾ ಒಪ್ಪಿಗೆಯಿಲ್ಲದೆ ಪ್ರಾಪ್ತ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಗಂಡನ ಮೇಲೆ ಅತ್ಯಾಚಾರ ಅಥವಾ ಅಸ್ವಾಭಾವಿಕ ಲೈಂಗಿಕತೆಯ ಆರೋಪ ಹೊರಿಸಲಾಗುವುದಿಲ್ಲ’ ಎಂದು ಛತ್ತೀಸ್‌ಗಢ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
“ಹೀಗಾಗಿ, ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಕಡಿಮೆಯಿಲ್ಲದಿದ್ದರೆ, ಗಂಡ ತನ್ನ ಹೆಂಡತಿಯೊಂದಿಗೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಯನ್ನು ಈ ಸಂದರ್ಭಗಳಲ್ಲಿ ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ, ಅಸ್ವಾಭಾವಿಕ ಕೃತ್ಯಕ್ಕೆ ಹೆಂಡತಿಯ ಒಪ್ಪಿಗೆ ಇಲ್ಲದಿರುವುದು ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ, ಮೇಲ್ಮನವಿದಾರನ ವಿರುದ್ಧ ಐಪಿಸಿಯ ಸೆಕ್ಷನ್ 376 ಮತ್ತು 377 ರ ಅಡಿಯಲ್ಲಿ ಅಪರಾಧವನ್ನು ಮಾಡಲಾಗುವುದಿಲ್ಲ ಎಂದು ಈ ನ್ಯಾಯಾಲಯವು ಪರಿಗಣಿಸುತ್ತದೆ” ಎಂದು ಪೀಠವು ತಿಳಿಸಿದ್ದಾಗಿ ವರದಿಯಾಗಿದೆ. ಇಷ್ಟೇ ಅಲ್ಲ ಎಲ್ಲಾ ಆರೋಪಗಳಿಂದ ಖುಲಾಸೆ ಮಾಡಿದ ಕೋರ್ಟ್ ಆರೋಪಿಯನ್ನು ದೋಷ ಮುಕ್ತಗೊಳಿಸಿದೆ.
ಏನಿದು ಪ್ರಕರಣ
2017ರ ಡಿಸೆಂಬರ್ 11ರಂದು ರಾತ್ರಿ ಒಬ್ಬ ಗಂಡನೊಬ್ಬ ತನ್ನ ಹೆಂಡತಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಅಸ್ವಾಭಾವಿಕ ಲೈಂಗಿಕತೆಗೆ ಒಳಪಡಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಬಳಿಕ, ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಳು. ತನ್ನ ಕೊನೆಯ ಹೇಳಿಕೆಯಲ್ಲಿ, ಗಂಡ ತನ್ನ ಮೇಲೆ ಬಲವಂತದ ಲೈಂಗಿಕ ಸಂಭೋಗ ನಡೆಸಿದ್ದಾನೆ ಎಂದು ಅವರು ಹೇಳಿದ್ದರು. ನಂತರ, ವೈದ್ಯರು ಮಹಿಳೆ ಪೆರಿಟೋನಿಟಿಸ್ ಮತ್ತು ಗುದನಾಳದ ರಂಧ್ರದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ ಎಂದು ನಿರ್ಧರಿಸಿದ್ದರು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದರು.
ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಪತ್ನಿ ಸಾವಿಗೆ ಪತಿಯ ಅಸಹಜ ಲೈಂಗಿಕ ಕ್ರಿಯೆ ಕಾರಣ ಅನ್ನೋದು ದೃತಪಟ್ಟಿತ್ತು. ಹೀಗಾಗಿ ಜಿಲ್ಲಾ ನ್ಯಾಯಾಲಯ ಪತಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್ ಮೆಟ್ಟೇಲಿರಿತ್ತು. ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಈ ಕುರಿತು ಮಹತ್ವದ ಆದೇಶ ನೀಡಿದೆ.
PublicNext
12/02/2025 11:48 am