ನವದೆಹಲಿ: ರಾಜಕೀಯದ ಅಪರಾಧೀಕರಣವು ಬಹಳ ಗಂಭೀರವಾದ ವಿಚಾರ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕ್ರಿಮಿನಲ್ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತನಾದ ವ್ಯಕ್ತಿಯು ಸಂಸತ್ತಿಗೆ ಮರಳುವುದು ಹೇಗೆ ಸರಿ ಎಂದು ಪ್ರಶ್ನಿಸಿದೆ.
ಈ ವಿಚಾರದಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ನೆರವು ಬೇಕು ಎಂದು ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ಮನಮೋಹನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ವಕೀಲರಾದ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ಪೀಠವು ನಡೆಸಿತು. ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 ಮತ್ತು 9ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗವು ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಪೀಠ ಸೂಚಿಸಿದೆ.
‘ವ್ಯಕ್ತಿಯು ಅಪರಾಧಿ ಎಂದು ಘೋಷಣೆಯಾಗಿ, ಆ ಘೋಷಣೆಯನ್ನು ಮೇಲಿನ ಹಂತದ ನ್ಯಾಯಾಲಯವು ಪುರಸ್ಕರಿಸಿದ ನಂತರ ಅಂತಹ ವ್ಯಕ್ತಿ ಸಂಸತ್ತಿಗೆ ಅಥವಾ ವಿಧಾನಸಭೆಗೆ ಮರಳುವುದು ಹೇಗೆ ಸರಿ? ಇದಕ್ಕೆ ಅವರು ಉತ್ತರ ನೀಡಬೇಕು. ಇಲ್ಲಿ ಹಿತಾಸಕ್ತಿಗಳ ಸಂಘರ್ಷವೂ ಇರುವಂತೆ ಕಾಣುತ್ತಿದೆ. ಶಾಸನಗಳನ್ನು ಅವರೇ ಪರಿಶೀಲನೆಗೆ ಒಳಪಡಿಸುತ್ತಿರುತ್ತಾರೆ ಎಂದು ಪೀಠ ಹೇಳಿದೆ.
PublicNext
11/02/2025 08:46 am