ನವಲಗುಂದ : ಸತ್ಯ ಅಹಿಂಸೆ , ಶಾಂತಿ, ಸತ್ಯಾಗ್ರಹ ಎಂಬ ಅಸ್ತ್ರಗಳ ಮೂಲಕ ಭಾರತಕ್ಕೆ ಸ್ವತಂತ್ರವನ್ನು ತಂದುಕೊಟ್ಟ ಶಾಂತಿದೂತ ರಾಷ್ಟ್ರಪಿತರಾದ ಗಾಂಧೀಜಿಯವರು ತಮ್ಮ ವಿಭಿನ್ನ ಹೋರಾಟದ ಮೂಲಕ 1920 ರಿಂದ 1947ರ ಅವಧಿಯಲ್ಲಿ ಗಾಂಧಿಯುಗ ಎಂಬ ವಿಶೇಷ ಚರಿತ್ರೆಯನ್ನು ಸೃಷ್ಟಿಸಿದರು ಎಂದು ಡಾ.ಪ್ರವೀಣ ದೊಡ್ಡಮನಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ದುರಾದೃಷ್ಟವಶಾತ್ 1948 ಜನವರಿ 30 ರಂದು ಗೋಡ್ಸೆ ಗುಂಡಿಗೆ ಬಲಿಯಾಗಿ ಗಾಂಧೀಜಿಯವರು ಹತ್ಯೆಯಾದರು. ಗಾಂಧಿಯವರು ಇಂದು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರ ತತ್ವಗಳಾದ ಹರಿಜನರ ಉದ್ದಾರ, ಮಹಿಳಾ ಶಿಕ್ಷಣ, ಸಾಮಾಜಿಕ ಸಮಾನತೆ, ಸಾಮಾಜಿಕ ನ್ಯಾಯ, ಸರ್ವೋದಯ ಸಮಾಜದ ಪರಿಕಲ್ಪನೆ, ಶಾಂತಿ ಮತ್ತು ಧರ್ಮಸಹಿಷ್ಣುತೆ ಮುಂತಾದ ವಿಚಾರಗಳು ಸರ್ವಕಾಲಿಕವಾಗಿ ಜೀವಂತವಾಗಿರುತ್ತವೆ ಹಾಗೂ ಅದರಂತೆ ನಡೆದುಕೊಳ್ಳುವುದು ಪರಿಪಾಲಿಸುವುದು ಇವತ್ತಿನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ ಬಿ ಬಾಗಡಿ, ಮಹಾತ್ಮ ಗಾಂಧೀಜಿ ಶ್ರೀಮಂತ ಕುಟುಂಬದಲ್ಲಿ ಜನಿಸಿ, ಸಕಲ ಸೌಲಭ್ಯಗಳನ್ನು ಅನುಭವಿಸುವ ಅವಕಾಶ ಇದ್ದರೂ ಕೂಡ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಮಹಾನಾಯಕ. ಮಹಾನ್ ಮಾನವತಾವಾದಿ, ಗಾಂಧಿಯವರ ವಿಚಾರಗಳನ್ನು ಎಲ್ಲ ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿ, ಗಾಂಧಿ ಅಧ್ಯಯನಕ್ಕೆ ಪ್ರೇರೇಪಣೆ ನೀಡಿದರು.
Kshetra Samachara
30/01/2025 06:50 pm