ಹೊಳೆನರಸೀಪುರ: ಹೊಳೆನರಸೀಪುರ ಪಟ್ಟಣದ ಬಿ.ಎಚ್.ರಸ್ತೆಯ ಚರಂಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸತ್ತ ಹಾವುಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಚರ್ಮ ಸುಲಿದು, ರಕ್ತಮಯ ಸ್ಥಿತಿಯಲ್ಲಿ ಹಾವುಗಳನ್ನು ಬಿಸಾಡಿರುವುದು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಹೊಳೆನರಸೀಪುರ-ಮೈಸೂರು ಹೆದ್ದಾರಿಯ ದರ್ಜಿ ಬೀದಿ ತಿರುವಿನ ಸಮೀಪ ಈ ಘಟನೆ ಬೆಳಕಿಗೆ ಬಂದಿದೆ. ಅಪರಿಚಿತರು ಹಾವುಗಳನ್ನು ಹಿಡಿದು, ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಚೀಲವನ್ನು ತೆಗೆದು ನೋಡಿದ ಬಡಾವಣೆಯ ಯುವಕರು ಆಘಾತಗೊಂಡಿದ್ದು, ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವುಗಳನ್ನು ಕೊಂದು ವಿಷ ಅಥವಾ ಮಾಂಸಕ್ಕಾಗಿ ದುರುಳರು ಈ ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
PublicNext
23/01/2025 10:00 pm