ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇತ್ತೀಚೆಗೆ 'ಅತ್ಯಂತ ಸುಂದರ ಸಾಧ್ವಿ' ಎಂದೇ ಖ್ಯಾತಿ ಪಡೆದಿದ್ದ harsha richhariya ಇದೀಗ ತಾನು ಸಾಧ್ವಿ ಅಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಹೌದು, ಹರ್ಷ ರಿಚಾರಿಯಾ, ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್. ಕೇವಲ 30ರ ಹರೆಯದ ಈ ಚೆಲುವೆ ಯಾವ ಬಾಲಿವುಡ್ ನಾಯಕಿಗಿಂತ ಕಡಿಮೆ ಇಲ್ಲ. ಇಂಥಾ ಹರ್ಷಾ ಕುಂಭಮೇಳದಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ಅತ್ಯಂತ ಸುಂದರ ಸಾಧ್ವಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರ್ಷ ರಿಚಾರಿಯಾ ವಿರುದ್ಧ ವಿರೋಧದ ಅಲೆ ಎದ್ದಿದೆ. ಹರ್ಷ ರಿಚಾರಿಯಾ ಅವರನ್ನು ಹೀನಾ-ಮಾನವಾಗಿ ಟ್ರೋಲ್ ಮಾಡಲಾಗುತ್ತಿದೆ. ಸಹಜವಾಗಿ ಯಾರೇ ಇರಲಿ ತಮ್ಮ ಸುತ್ತ ಮುತ್ತ ಪ್ರೋತ್ಸಾಹದ ಮಾತುಗಳನ್ನಾಡುವ ಬದಲು ಕಾಲೆಳೆಯುವರ ಸಂಖ್ಯೆ ಹೆಚ್ಚಾದಾಗ ನೋವಾಗಿಯೇ ಆಗುತ್ತೆ. ದುಃಖದ ಕಟ್ಟೆ ಒಡೆಯುತ್ತೆ. ಹರ್ಷಾ ರಿಚಾರಿಯಾ ಅವರಿಗೆ ಕೂಡ ಇಂತಹದ್ದೇ ಅನುಭವ ಆಗಿದೆಯಾ ಗೊತ್ತಿಲ್ಲ.
ಆದರೆ.. ಸದ್ಯ ಮಹಾ ಕುಂಭಮೇಳದಲ್ಲಿರುವ ಹರ್ಷ ರಿಚಾರಿಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕಣ್ಣೀರು ಹಾಕಿದ್ದಾರೆ. ಸದ್ಯಕ್ಕೆ ಹರ್ಷ ಅವರ ಈ ಕಣ್ಣೀರಧಾರೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಹೌದು, ಅಸಲಿಗೆ ಕುಂಭಮೇಳದಲ್ಲಿ ಮೊದಲು ಎಲ್ಲರ ಕಣ್ಣಿಗೆ ಬಿದ್ದಾಗ ತಾವು ಎರಡು ವರ್ಷಗಳ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದಾರೆ ಎಂದು ಹರ್ಷ ರಿಚಾರಿಯಾ ಹೇಳಿದ್ದರು. ಆದರೆ, ಇವರ ಸೋಶಿಯಲ್ ಮೀಡಿಯಾದಲ್ಲಿನ ಭಾವಚಿತ್ರಗಳು ಹೇಳಿದ್ದ ಕಥೆ ಭಿನ್ನವಾಗಿದ್ದವು.
ಹೀಗಾಗಿ ಅನೇಕರು ಇವರನ್ನು ಟ್ರೋಲ್ ಮಾಡಿದ್ದರು. ದೀಕ್ಷೆ ಪಡೆದ ನಂತರ ಚಿಕ್ಕ ಚಿಕ್ಕ ಬಟ್ಟೆಯನ್ನೆಲ್ಲ ಹಾಕಿ ದೇಶ ವಿದೇಶಗಳನ್ನೆಲ್ಲ ತಿರುಗಬಹುದಾ ಎಂದು ಪ್ರಶ್ನೆ ಮಾಡಿದ್ದರು. ಕಳ್ಳ ಸಾಧ್ವಿ ಎಂದೆಲ್ಲ ಹೀಯಾಳಿಸಲು ಶುರು ಮಾಡಿದ್ದರು.
ಹರ್ಷ ರಿಚಾರಿಯಾ ಕುರಿತ ಈ ಸುದ್ದಿಗಳು ಕುಂಭಮೇಳದಲ್ಲಿರುವ ಸನ್ಯಾಸಿಗಳನ್ನು ಕೂಡ ತಲುಪಿದವು. ಇದಕ್ಕೆ ಪುರಾವೆ ಎನ್ನುವಂತೆ ಹರ್ಷ ರಿಚಾರಿಯಾ ಅವರಿಗೆ ಕುಂಭ ಮೇಳದಿಂದ ಹೊರ ಹೋಗುವಂತೆ ಅವರ ಗುರಗಳೇ ಆದೇಶವನ್ನು ನೀಡಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ನಿರಂಜನಿ ಅಖಾಡದ ಛಾವಣಿಯಲ್ಲಿ ಸಂತರ ಜೊತೆ ಹರ್ಷ ರಿಚಾರಿಯಾ ಕುಳಿತುಕೊಂಡಿದ್ದಕ್ಕೆ ಅನೇಕ ಸಂತ-ಋಷಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಕುಂಭಮೇಳ ಜಪ, ತಪ ಮತ್ತು ಜ್ಞಾನಕ್ಕಾಗಿ, ಅಖಾಡಗಳ ಮೋಜು ತೋರಿಸೋಕೆ ಅಲ್ಲ ಎಂದು ಕಾಳಿ ಸೇನೆಯ ಮುಖ್ಯಸ್ಥ ಸ್ವಾಮಿ ಆನಂದ ಸ್ವರೂಪ ಕಿಡಿ ಕಾರಿದ್ದಾರೆ. ಈ ಸುದ್ದಿಗಳನ್ನು ಪುಷ್ಠೀಕರಿಸಿರುವ ಹರ್ಷ ರಿಚಾರಿಯಾ ಆನಂದ ಸ್ವರೂಪ ಸ್ವಾಮಿಗಳ ವಿರುದ್ದ ಕಿಡಿ ಕಾರಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಹರ್ಷ ರಿಚಾರಿಯಾ ಕಣ್ಣೀರು ಹಾಕಿದ್ದಾರೆ. ನಾಚಿಕೆ ಆಗಬೇಕು ನಿಮಗೆಲ್ಲ, ಒಂದು ಹುಡುಗಿ ಮಹಾಕುಂಭದಲ್ಲಿ ಭಾಗಿಯಾಗುವುದೇ ಸೌಭಾಗ್ಯವೆಂದು ತಿಳಿದುಕೊಂಡು ಬಂದಾಗ ಆಕೆಯನ್ನು ನೀವು ಮಹಾಕುಂಭದಲ್ಲಿ ಇರಲು ಕೂಡ ಬಿಡುತ್ತಿಲ್ಲ. ಈ ಕುಂಭಮೇಳ ನಮ್ಮ ಜೀವನದಲ್ಲಿ ಒಮ್ಮೆ ಬರುತ್ತೆ ಆದರೆ ನೀವು ನನ್ನಿಂದ ನನ್ನ ಸಂಭ್ರಮ ನನ್ನ ಕ್ಷಣವನ್ನು ಕಸಿದುಕೊಂಡಿದ್ದೀರಿ ಎಂದು ಹರ್ಷ ರಿಚಾರಿಯಾ ಕಿಡಿ ಕಾರಿದಿದ್ದಾರೆ.
ನಾನು ಯಾವ ತಪ್ಪು ಮಾಡದಿದ್ದರೂ ಕೂಡ ನನ್ನ ಮೇಲೆ ಠೀಕೆ ಮಾಡ್ತಿದ್ದಾರೆ ಎಂದು ಹೇಳಿರುವ ಹರ್ಷ ರಿಚಾರಿಯಾ ಈ ಕೆಲಸ ಮಾಡಿದ್ದಕ್ಕೆ ಆನಂದ ಸ್ವರೂಪ ಸ್ವಾಮಿಗಳಿಗೆ ಪಾಪ ಮಾತ್ರ ತಗಲುತ್ತೆ ಎಂದು ಹೇಳಿದ್ದಾರೆ. ನಾನ್ಯಾವುದೋ ದೊಡ್ಡ ತಪ್ಪು ಮಾಡಿರುವಂತೆ ರೂಮ್‌ನಲ್ಲಿ ನನ್ನ ಕೂಡಿ ಹಾಕಿದ್ದಾರೆ ನಿಮಗೆಲ್ಲ ದೊಡ್ಡ ನಮಸ್ಕಾರ ಇಲ್ಲಿ ಇರುವುದಕ್ಕಿಂತ ಮರಳಿ ಹೋಗುವುದೇ ಉತ್ತಮ ಎಂದು ಹರ್ಷ ರಿಚಾರಿಯಾ ಬಿಕ್ಕಿದ್ದಾರೆ. ಸದ್ಯಕ್ಕೆ ಹರ್ಷ ರಿಚಾರಿಯಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
PublicNext
19/01/2025 02:49 pm