ಸುಳ್ಯ : ಮದ್ಯದ ಮತ್ತಲ್ಲಿ ಪುತ್ರನಿಗೆ ಗುರಿಯಿಟ್ಟ ಕೋವಿಗುಂಡು ಪತ್ನಿಗೆ ತಗುಲಿ ಆಕೆ ಬಲಿಯಾದ್ದರಿಂದ ಮನನೊಂದು ಪತಿಯೂ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ನೆಕ್ರಾಜೆಯಲ್ಲಿ ನಡೆದಿದೆ.
ನೆಕ್ರಾಜೆ ಗ್ರಾಮದ ರಾಮಚಂದ್ರ ಗೌಡ(53) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ವಿನೋದ(45) ಪತಿಯಿಟ್ಟ ಗುಂಡಿಗೆ ಬಲಿಯಾದವರು. ಶುಕ್ರವಾರ ರಾತ್ರಿ 10ಗಂಟೆ ಸುಮಾರಿಗೆ ರಾಮಚಂದ್ರ ಗೌಡ ಮದ್ಯಸೇವಿಸಿ ಬಂದು ಮನೆಯಲ್ಲಿ ಗಲಾಟೆ ಮಾಡಿದ್ದರು. ಈ ವೇಳೆ, ಮಾತಿಗೆ ಮಾತು ಬೆಳೆದು ಹಿರಿಯ ಪುತ್ರನ ಮೇಲೆ ಸಿಟ್ಟಾಗಿ ಕೋವಿ ತೆಗೆದುಕೊಂಡು ಬಂದಿದ್ದರು. ಪುತ್ರನಿಗೆ ಗುರಿಯಿಟ್ಟು ಗುಂಡು ಹಾರಿಸಲು ಯತ್ನಿಸಿದಾಗ, ಪತ್ನಿ ವಿನೋದ ತಡೆಯಲು ಬಂದಿದ್ದರು.
ಈ ವೇಳೆ ಅವರು ಪತಿಯನ್ನು ಬೆಡ್‌ರೂಮಿಗೆ ತಳ್ಳಲು ಯತ್ನಿಸಿದಾಗ, ಕೋವಿ ಟ್ರಿಗ್ಗರ್ ಒತ್ತಲ್ಪಟ್ಟು ಪತ್ನಿಯ ಎದೆಗೆ ಗುಂಡು ಹೊಕ್ಕಿದೆ. ಪರಿಣಾಮ ಪತ್ನಿ ವಿನೋದ ಗಂಭೀರವಾಗಿ ಗಾಯಗೊಂಡು ನೆಲಕ್ಕುರುಳಿ ಪ್ರಾಣ ಬಿಟ್ಟಿದ್ದಾರೆ. ಪತ್ನಿ ಮೃತಪಟ್ಟಿದ್ದರಿಂದ ಭಯಗೊಂಡು ರಾಮಚಂದ್ರ ಗೌಡ ರಬ್ಬರ್ ಗಿಡಕ್ಕೆ ಹಾಕಲು ತಂದಿದ್ದ ಕೀಟನಾಶಕವನ್ನು ಕುಡಿದು ಪತ್ನಿ ಬಿದ್ದ ಜಾಗದಲ್ಲೇ ಬಿದ್ದು ಮೃತಪಟ್ಟಿದ್ದಾರೆ. ಮನೆಯವರ ಕಣ್ಣೆದುರಲ್ಲೇ ಘಟನೆ ನಡೆದಿದ್ದು ಪತಿ- ಪತ್ನಿ ದುರಂತ ಸಾವು ಕಂಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಯತೀಶ್ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
PublicNext
18/01/2025 12:53 pm