ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ಧಾಮ, ಕೊಪ್ಪಳದ ಬಂಕಾಪುರ ತೋಳ ವನ್ಯಜೀವಿಧಾಮ, ಚಿತ್ರದುರ್ಗದ ಉತ್ತರೆಗುಡ್ಡ ವನ್ಯಜೀವಿಧಾಮ ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ಕರಡಿ ವನ್ಯಜೀವಿಧಾಮಗಳ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಸಂಬಂಧ ಸಂಪುಟಕ್ಕೆ ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ಪರಿಸರ ಸೂಕ್ಷ್ಮ ವಲಯಗಳ ಅಧಿಸೂಚನೆ ಹೊರಡಿಸುವ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಘೋಷಿಸಲಾಗಿರುವ ವನ್ಯಜೀವಿಧಾಮಗಳಿಗೆ ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಸಾರ್ವಜನಿಕರಿಗಾಗಲೀ, ಸ್ಥಳೀಯರಿಗಾಗಲೀ ಯಾವುದೇ ತೊಡಕುಂಟಾಗುವುದಿಲ್ಲ , ರಾಜ್ಯದ 4 ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಕನಿಷ್ಠ 1 ಕಿ.ಮೀ. ನಿಂದ 10 ಕಿ.ಮೀಟರ್ ವರೆಗೆ ಪರಿಸರ ಸೂಕ್ಷ್ಮ ವಲಯ (ESZ) ಘೋಷಣೆ ಮಾಡಲಾಗುತ್ತಿದ್ದು, ಜನವಸತಿ ಮತ್ತು ಪಟ್ಟಾ ಜಮೀನು ಇರುವ ಪ್ರದೇಶದಲ್ಲಿ ಕೇವಲ 1 ಕಿ.ಮೀ ಮಾತ್ರವೇ ಘೋಷಿಸುವ ಕಾರಣ ಇದರಿಂದ ಸ್ಥಳೀಯರಿಗಾಗಲೀ, ರೈತರಿಗಾಗಲೀ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಮೃಗ ಧಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಘೋಷಿಸಬೇಕು ಎಂದು ಘನ ಸುಪ್ರೀಂಕೋರ್ಟ್ ಗೋದಾವರ್ಮನ್ Vs ಭಾರತ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ತಿಳಿಸಿದರು.
ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮಾರ್ಗಸೂಚಿಗಳನ್ವಯ ಪರಿಸರ ಸೂಕ್ಷ್ಮ ವಲಯದಲ್ಲಿ ಉತ್ತೇಜಕ (Promoted) ಚಟುವಟಿಕೆ, ನಿರ್ಬಂಧಿತ (Regulated) ಮತ್ತು ನಿಷೇಧಿತ (prohibited) ಚಟುವಟಿಕೆ ಎಂದು ವರ್ಗೀಕರಿಸಲಾಗಿದೆ. ಉತ್ತೇಜಕ ಚಟುವಟಿಕೆಗಳಲ್ಲಿ – ಹಾಲಿ ಇರುವ ಕೃಷಿ, ಸಾವಯವ ಕೃಷಿ, ತೋಟಗಾರಿಕೆ, ಸೌರ ಫಲಕ ಅಳವಡಿಕೆಯಂತಹ ಚಟುವಟಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದೂ ತಿಳಿಸಿದರು.
ನಿರ್ಬಂಧಿತ ಚಟುವಟಿಕೆಗಳಲ್ಲಿ – ಪರಿಸರ ಪ್ರವಾಸೋದ್ಯಮ, ಹೋಂಸ್ಟೇ, ರೆಸಾರ್ಟ್, ಹೊಟೆಲ್, ಶಾಲೆ, ಆಸ್ಪತ್ರೆ, ಸರ್ಕಾರಿ ಕಟ್ಟಡ, ಕಟ್ಟಡ ನಿರ್ಮಾಣ, ವಿದ್ಯುತ್ ಕೇಬಲ್ ಅಳವಡಿಕೆ, ಮೂಲಸೌಕರ್ಯ ಇತ್ಯಾದಿ ಬರುತ್ತದೆ. ಇದಕ್ಕೆ ಪ್ರಾದೇಶಿಕ ಆಯುಕ್ತರ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದು ಕಾರ್ಯಾಚರಣೆ ಮಾಡಬಹುದು.
ನಿಷೇಧಿತ ಚಟುವಟಿಕೆಗಳಲ್ಲಿ – ಅಪಾಯಕಾರಿ ತ್ಯಾಜ್ಯ ಹೊರಹಾಕುವ, ಶಬ್ದ, ವಾಯು ಮಾಲಿನ್ಯ ಉಂಟು ಮಾಡುವ ಕೆಂಪು ಪ್ರವರ್ಗದ ಕೈಗಾರಿಕೆ. ವಾಣಿಜ್ಯ ಗಣಿಗಾರಿಕೆ, ಸಾ ಮಿಲ್ ಸ್ಥಾಪನೆ, ವಾಣಿಜ್ಯ ಉದ್ದೇಶದ ಉರುವಲು ಸಂಗ್ರಹ ಇತ್ಯಾದಿ ಬರುತ್ತದೆ. ಈ ಪ್ರದೇಶಗಳಲ್ಲಿ ಮರ ಕಡಿಯಲು ವೃಕ್ಷ ಸಂರಕ್ಷಣಾ ಕಾಯಿದೆ ಅಡಿ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಎಂದು ವಿವರ ನೀಡಿದರು.
PublicNext
16/01/2025 08:29 pm