ಬೆಂಗಳೂರು : HMT ಅರಣ್ಯ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರದ ಜಟಾಪಟಿ ಮುಂದುವರೆದಿದೆ. ಎಚ್‌ಎಂಟಿ ಲಿಮಿಟೆಡ್‌ನ ಸ್ವಾಧಿನದಲ್ಲಿರುವ ರೂ.14300 ಕೋಟಿ ಮೌಲ್ಯದ ಅರಣ್ಯ ಭೂಮಿ ರಾಜ್ಯ ಸರ್ಕಾರಕ್ಕೆ ಹಿಂಪಡೆಯಲು ಅಗತ್ಯ ಕ್ರಮ ಜರುಗಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಎಚ್‌ಎಂಟಿ ಕಾರ್ಖಾನೆಯು ಬೆಂಗಳೂರಿನಲ್ಲಿ ಹೊಂದಿರುವ ಪ್ರದೇಶಗಳನ್ನು ಕೇಂದ್ರ ಸರ್ಕಾರದ ಇತರೆ ಸಂಸ್ಥೆಗಳಿಗೆ ಹಸ್ತಾಂತರಿಸಲು ನಿರಾಕ್ಷೇಪಣಾ ಪತ್ರ ನೀಡುವ ಕುರಿತು ಅಧಿಕಾರಿಗಳು ತಮ್ಮದೇ ಆದ ನಿರ್ಧಾರ ತೆಗೆದುಕೊಂಡಿದ್ದು, ಮತ್ತು ಸಚಿವ ಸಂಪುಟದ ಪೂರ್ವಾನುಮತಿ ಅಥವಾ ಉನ್ನತ ಮಟ್ಟದ ಸಮಿತಿಯ ಅನುಮೋದನೆಯನ್ನು ಪಡೆಯದೇ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಿಂಪಡೆಯಲು ಸಲ್ಲಿಸಲಾಗಿರುವ ರಾಜ್ಯ ಸರ್ಕಾರದ ಅರ್ಜಿ ಸಲ್ಲಿಕೆಗೆ ಅರಣ್ಯ ಸಚಿವರು ತೆಗೆದುಕೊಂಡಿರುವ ನಿರ್ಣಯಕ್ಕೆ ರಾಜ್ಯ ಸಚಿವ ಸಂಪುಟ ಘಟನೋತ್ತರ ಮಂಜೂರಾತಿ ನೀಡಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಮಾಹಿತಿ ನೀಡಿದರು.
ಎಚ್ಎಂಟಿ ಕಂಪನಿ ಕೆಲವು ಅರಣ್ಯ ಭಾಗವನ್ನು ಬೇರೆ ಸಂಸ್ಥೆಗಳಿಗೆ ಮಾರಾಟ ಮಾಡಿದೆ. 160 ಎಕರೆ ಭೂಮಿಯನ್ನು 375 ಕೋಟಿಗೆ ಮಾರಾಟ ಮಾಡಿದೆ. ಈ ಭೂಮಿಯನ್ನ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲಾಗಿದೆ.
ಮಾರಾಟ ಸಂದರ್ಭದಲ್ಲಿ ಅರಣ್ಯ ಇಲಾಖೆ, ಅರಣ್ಯ ಸಚಿವರು ಯಾರಿಂದಲೂ ಅನುಮತಿ ಪಡೆದಿಲ್ಲ, ಅಲ್ದೇ 180 ಎಕರೆ ಅರಣ್ಯ ಭೂಮಿಯನ್ನು ಇದೀಗ ಮಾರಾಟ ಮಾಡಲು ಹೊರಟಿದ್ದಾರೆ. 160 ಎಕರೆ ಮಾರಾಟ ಆಗಿದೆ ಅದು ಅರಣ್ಯ ಭೂಮಿ ಡಿನೋಟೀಫೈ ಆಗಿಲ್ಲ ಆದಾಗ್ಯೂ ಮಾರಾಟ ಮಾಡಿರುವುದು ಕಂಡಿದೆ. ಈ ಪ್ರಶ್ನಾರ್ಹ ಭೂಮಿಯನ್ನು ಡಿನೋಟಿ ಫೈ ಮಾಡುವುದಕ್ಕೆ ಸುಪ್ರಿಂ ಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು.
2015ರಲ್ಲಿ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಮಿತಿ ಕೂಡ ರಚಿಸಲಾಗಿತ್ತು, ಈ ಅರಣ್ಯ ಭೂಮಿ ಡಿನೋಟಿಫೈ ಮಾಡಿದರೆ ರಾಜ್ಯಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತದೆ, ಬೆಂಗಳೂರಿನ ಶ್ವಾಸಕೋಶದ ಸ್ಥಳ ಕಳೆದುಕೊಳ್ಳುತ್ತದೆ. ಎಚ್ಎಂಟಿಗೆ ಅರಣ್ಯ ಭೂಮಿ ನೀಡಿದ್ದ ಉದ್ದೇಶ ಈಡೇರಿಲ್ಲ, ಹೀಗಾಗಿ ಸುಪ್ರಿಂ ಕೋರ್ಟ್ ನಲ್ಲಿರುವ ಮಧ್ಯಂತರ ಅರ್ಜಿ ಹಿಂಪಡೆಯಬೇಕು ಎಂದು ಕ್ಯಾಬಿನೆಟ್ ನಲ್ಲಿ ನಿರ್ಣಯ ಮಾಡಲಾಗಿದೆ.
PublicNext
16/01/2025 07:33 pm