ಪ್ರಯಾಗ್ ರಾಜ್ : ಮಹಾಕುಂಭಮೇಳಕ್ಕೆ ಆಗಮಿಸಿರುವ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಆಪಲ್ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್‌ರ ಪತ್ನಿ ಲಾರೆನ್ ಪೊವೆಲ್ ಸೋಮವಾರ ಜನಸಂದಣಿಯಿಂದಾಗಿ ಕೊಂಚ ಅಸ್ವಸ್ಥರಾಗಿದ್ದು, ಗಂಗಾ ಸ್ನಾನದ ಬಳಿಕ ಚೇತರಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟೊಂದು ಜನಸಂದಣಿಯಲ್ಲಿ ಬೆರೆತ ಕಾರಣ ಅವರಿಗೆ ಅಲರ್ಜಿ ಉಂಟಾಗಿತ್ತು ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಉತ್ತರಪ್ರದೇಶ ಸರ್ಕಾರ, ‘ಅಸ್ವಸ್ಥರಾಗಿದ್ದ ಲಾರೆನ್ ಗಂಗೆಯಲ್ಲಿ ಮಿಂದೆದ್ದು, ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಸನಾತನ ಧರ್ಮದ ಕುರಿತು ಆಳವಾಗಿ ಅಧ್ಯಯನ ಮಾಡುವ ಉತ್ಸಾಹ ಅವರಲ್ಲಿ ಬಲವಾಗಿದೆ’ ಎಂದು ಸ್ವಾಮಿ ಕೈಲಾಸಾನಂದರ ಹೇಳಿಕೆಯನ್ನು ಉಲ್ಲೇಖಿಸಿದೆ.
ಲಾರೆನ್ ಪೊವೆಲ್ ಜಾಬ್ಸ್ ಸನಾತನ ಧರ್ಮ ಸ್ವೀಕರಿಸಿದ್ದಾರೆ. ಲಾರೆನ್ ಪೊವೆಲ್ ನಿಂದ ಕಮಲಾ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಮಕರ ಸಂಕ್ರಾಂತಿಯ ಪವಿತ್ರ ಹಬ್ಬದಂದು ಶ್ರೀನಿರಂಜನಿ ಅಖಾಡಾದ ಮುಖ್ಯಸ್ಥ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರ ಆಚಾರ್ಯ ಶಿಬಿರದಲ್ಲಿ ವಿಧಿವಿಧಾನಗಳ ಪ್ರಕಾರ ಪೂಜೆ ಸಲ್ಲಿಸಿದರು. ಸದಾ ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸುವ ಪ್ರತಿಜ್ಞೆ ಸ್ವೀಕರಿಸಿದರು.
ಪೊವೆಲ್ ಜಾಬ್ಸ್ ಸನಾತನ ಧರ್ಮದಲ್ಲಿ ತೀವ್ರ ಆಸಕ್ತಿ ಹೊಂದಿರುವ ಸರಳ, ಸದ್ಗುಣ ಮತ್ತು ವಿನಮ್ರ ಮಹಿಳೆಯಾಗಿದ್ದಾರೆ. ಆಕೆ ಅಹಂದಿಂದ ಮುಕ್ತವಾಗಿದ್ದು, ತನ್ನ ಗುರುವಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಆಕೆಯ ಎಲ್ಲಾ ಪ್ರಶ್ನೆಗಳು ಸನಾತನ ಧರ್ಮದ ಸುತ್ತ ಸುತ್ತುತ್ತವೆ ಮತ್ತು ಸಿಗುವ ಉತ್ತರಗಳಲ್ಲಿ ಹೆಚ್ಚಿನ ಸಂತೋಷ ಮತ್ತು ತೃಪ್ತಿಯನ್ನು ಕಂಡುಕೊಳ್ಳುತ್ತಾಳೆ ಎಂದು ಕೈಲಾಸಾನಂದ ಅವರು ಹೇಳಿದರು.
ಪೊವೆಲ್ ಜಾಬ್ಸ್ ಅವರ ಆಧ್ಯಾತ್ಮಿಕತೆಯ ಅನ್ವೇಷಣೆಯು ಇಲ್ಲಿಗೆ ಕರೆತಂದಿದೆ. ಅಖಾರದಲ್ಲಿ ಅವರು ನಡೆದುಕೊಂಡ ರೀತಿ ಎಲ್ಲಾವನ್ನೂ ಸ್ಪಷ್ಪಪಡಿಸುತ್ತದೆ. ಪ್ರಪಂಚದ ಅತ್ಯಂತ ಶ್ರೀಮಂತೆ, ಪ್ರಸಿದ್ಧ ಮಹಿಳೆಯಾಗಿದ್ದರೂ ಅವರು ಎಲ್ಲಿಯೂ ಅಹಂ ತೋರಿಸಲಿಲ್ಲ. ಸರಳ ಉಡುಪು ಧರಿಸಿ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡರು ಎಂದು ನಿರಂಜಿನಿ ಅಖಾರ ಶಿಬಿರದ ಮುಖ್ಯಸ್ಥ ಹಾಗೂ ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಮಹಾಂತ ರವೀಂದ್ರ ಪುರಿ ತಿಳಿಸಿದರು.
ಜನವರಿ 15 ರವರೆಗೆ ನಿರಂಜಿನಿ ಅಖಾರ ಶಿಬಿರದಲ್ಲಿರುವ ಕುಂಭ ಟೆಂಟ್ ನಗರದಲ್ಲಿ ಅವರು ತಂಗಿದ್ದಾರೆ. ಜನವರಿ 20 ರಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಮರಳಲಿದ್ದಾರೆ.
PublicNext
15/01/2025 07:36 pm