ಬೆಳಗಾವಿ: ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ 5 ಗಂಟೆ ಸುಮಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿದೆ. ಯಾವುದೋ ಒಂದು ಪ್ರಾಣಿ ಅಡ್ಡ ಬಂದಿದೆ. ಅದರ ಜೀವ ಉಳಿಸಲು ಮತ್ತು ಎದುರಿಗೆ ಬರುತ್ತಿದ್ದ ಕ್ಯಾಂಟರ್ ಅಪಘಾತ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯ ಪಕ್ಕದ ಗಿಡಕ್ಕೆ ಕಾರು ಡಿಕ್ಕಿ ಹೊಡೆದಿದೆ ಎಂದು ಸಚಿವೆ ಹೆಬ್ಬಾಳ್ಕರ್ ಕಾರು ಅಪಘಾತದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ದುರಾದೃಷ್ಟ ಘಟನೆ. ಈಗಾಗಲೇ ಬೆಳಗಾವಿಯ ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿನ ವೈದ್ಯರ ಜೊತೆ ನಾನು ಮಾತಾಡಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕತ್ತಿಗೆ ನೋವಾಗಿದ್ದರಿಂದ ಎರಡು ದಿನ ಅವರು ಆಸ್ಪತ್ರೆಯಲ್ಲೇ ಇರುವ ಅಗತ್ಯತೆಯಿದೆ. ಇನ್ನು ಚನ್ನರಾಜ ಹಟ್ಟಿಹೊಳಿ ಅವರಿಗೆ ತಲೆಗೆ ಸಣ್ಣ ಗಾಯವಾಗಿದ್ದು, ಇಲ್ಲಿ ಚಿಕಿತ್ಸೆ ಪಡೆದಿರುವ ಅವರು ಮನೆಗೆ ಹೋಗಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ಮೇಲಾಧಿಕಾರಿಗಳು ಘಟನೆ ಕುರಿತು ಕೇಳಿದ ಮಾಹಿತಿ ನೀಡಲಾಗಿದೆ. ಬೆಂಗಾವಲು ಪಡೆ ಕಾರು ಮುಂದಿತ್ತು. ನಡುವೆ ಕ್ಯಾಂಟರ್ ಇತ್ತು. ಅಪಘಾತವಾದ ಕಾರು ಸರ್ಕಾರದ್ದು. ಇನ್ನು ಚಾಲಕ ಕೂಡ ಸರ್ಕಾರಿ ಸಿಬ್ಬಂದಿ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.
PublicNext
14/01/2025 11:17 am