ಪ್ರಯಾಗ್‌ರಾಜ್: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಇಂದು (ಸೋಮವಾರ) ಆರಂಭವಾಗಿದೆ. ಇನ್ನು 45 ದಿನಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ ದೊರತಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆಯಾಗಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಇದೇ ಮೊದಲ ಬಾರಿಗೆ ಎನ್‌ಡಿಆರ್‌ಎಫ್ ಪಡೆಯಿಂದ ನೀರನ ಮೇಲೆ ಅಂಬುಲೆನ್ಸ್ ನಿರ್ಮಾಣ ಮಾಡಲಾಗಿದೆ. ಐಸಿಯು ಸೌಲಭ್ಯ ಹೊಂದಿರುವ ಅಂಬುಲೆನ್ಸ್‌ಗಳನ್ನು ನದಿ ನೀರಿನ ಮೇಲೆ ನಿಲ್ಲಿಸಲಾಗಿದೆ. ಅಂಬುಲೆನ್ಸ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಾಸಿಗೆಗಳ ಜೊತೆಗೆ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ನದಿಯಲ್ಲಿ ಸ್ನಾನ ಮಾಡುವವರ ಸುರಕ್ಷತೆಗಾಗಿ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್‌ಟೇಬಲ್, 150 ಎಸ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
10,000 ಹೆಕ್ಟೇರ್‌ಗಳ ವಿಶಾಲ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಮಹಾ ಕುಂಭಮೇಳದ ಯಶಸ್ಸಿಗಾಗಿ ಉತ್ತರ ಪ್ರದೇಶದ ಸರ್ಕಾರ ಈಗಾಗಲೇ 9,000 ಕೋಟಿ ರೂ. ಅನುದಾನ ನೀಡಿದೆ. ಕೋಟ್ಯಂತರ ಭಕ್ತರಿಗಾಗಿ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಭಕ್ತಾಧಿಗಳ ಸಂಚಾರಕ್ಕಾಗಿ 30 ಕಿರು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.
400 ಕಿ.ಮೀ.ಗೂ ಹೆಚ್ಚು ತಾತ್ಕಾಲಿಕ ರಸ್ತೆಗಳನ್ನು ರಚಿಸಲಾಗಿದೆ. 69,000 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಭಕ್ತರಿಗೆ ರಾತ್ರಿ ವೇಳೆಯೂ ಸೂಕ್ತವಾದ ರಕ್ಷಣೆ ಇರಲಿದೆ.
ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳನ್ನು ನಿರ್ಮಿಸಲಾಗಿದೆ. ಈಗಾಗಲೇ 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಾ ಕುಂಭ ಮೇಳ ಹಿನ್ನೆಲೆಯಲ್ಲಿ ನಗರದ 29 ದೇವಾಲಯಗಳನ್ನು ನವೀಕರಿಸಲಾಗಿದೆ. 1,800 ಹೆಕ್ಟೇರ್ ಪ್ರದೇಶವನ್ನು ವಾಹನಗಳ ಪಾರ್ಕಿಂಗ್‌ಗಾಗಿ ಕಾಯ್ದಿರಿಸಲಾಗಿದೆ.
ಎನ್‌ಎಸ್‌ಜಿ, ಯುಪಿ ಪೊಲೀಸ್, ಯುಪಿ ಎಟಿಎಸ್ ಮತ್ತು ಪಿಎಸಿಗಳಿಂದ ಭದ್ರತೆ ಒದಗಿಸಲಾಗಿದೆ. ಗಾಳಿ, ನೆಲ ಅಥವಾ ನೀರಿನ ಮೂಲಕ ಯಾವುದೇ ದಾಳಿಗಳು ನಡೆದರೂ ಪ್ರತಿರೋಧಕ್ಕೆ ಸಿದ್ಧವಾಗಿದ್ದು, ದೇವಸ್ಥಾನ ಹಾಗೂ ನಾಗ ಸಾಧುಗಳ ಅಖಾಡಗಳಿಗೆ ಚಕ್ರವ್ಯೂಹದ ಭದ್ರತೆ ಒದಗಿಸಲಾಗಿದೆ.
ಏಳು ನಿರ್ಣಾಯಕ ಮಾರ್ಗಗಳಲ್ಲಿ 102 ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ, ಬಸ್ ನಿಲ್ದಾಣಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಮಹಾಕುಂಭ ನಡೆಯುವ ಪ್ರದೇಶದಲ್ಲಿ ದೇವಸ್ಥಾನಗಳು, ನಾಗಸಾಧುಗಳ ಅಖಾಡಗಳಿಗೆ ಚಕ್ರವ್ಯೂಹ ಎಂದು ಕರೆಯಲ್ಪಡುವ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 37,000 ಪೊಲೀಸರನ್ನು ಹಾಗೂ 14,000 ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.
ಉತ್ತರ ಪ್ರದೇಶ ಪೊಲೀಸರ ಜೊತೆಗೆ ರಾಜ್ಯ ಭಯೋತ್ಪಾದನಾ ನಿಗ್ರಹ ದಳ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬ್ಯುಲರಿಯಿಂದ ಭದ್ರತೆ ಒದಗಿಸಲಾಗಿದೆ. ಪೊಲೀಸರು ನೀರೊಳಗಿನ ಡೋನ್‌ಗಳು ಮತ್ತು ಎಐ-ಸಕ್ರಿಯಗೊಳಿಸಿದ ಕ್ಯಾಮೆರಾಗಳು ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಸಹ ಬಳಸುತ್ತಿದ್ದಾರೆ. ಕುಂಭ ಪ್ರದೇಶದ ಸುತ್ತಲೂ ಒಟ್ಟು 2,700 ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ.
113 ನೀರೊಳಗಿನ ಡೋನ್‌ಗಳು ಜಲಮಾರ್ಗಗಳನ್ನು ಮೇಲ್ವಿಚಾರಣೆ ಮಾಡುತ್ತವೆ. ಈ ಡೋನ್‌ಗಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನ ಹೊಂದಿರುವ ರಿಸ್ಟ್ ಬ್ಯಾಂಡ್‌ಗಳನ್ನು ಒದಗಿಸಲಾಗಿದೆ. ಇದರ ಸಹಾಯದಿಂದ ಮೇಳದಲ್ಲಿ ಯಾರಾದರೂ ಕಳೆದು ಹೋದಲ್ಲಿ ಅವರನ್ನು ಈ ತಂತ್ರಜ್ಞಾನದ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ.
PublicNext
13/01/2025 05:34 pm