ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲು ನಿಲ್ಲಬೇಕಿತ್ತು. ಅದರಲ್ಲೂ ವಾರಾಂತ್ಯ, ರಜಾ ದಿನಗಳಲ್ಲಿ ಸರತಿ ಸಾಲು ಬಹಳಷ್ಟು ಉದ್ದವಾಗುತ್ತಿತ್ತು. ಭಕ್ತರ ಈ ಕಷ್ಟವನ್ನರಿತ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಇದಕ್ಕೊಂದು ಪರಿಹಾರ ಮಾರ್ಗೋಪಾಯದ ವ್ಯವಸ್ಥೆ ಮಾಡಿದ್ದಾರೆ. ಈ ವ್ಯವಸ್ಥೆ ರಾಜ್ಯದಲ್ಲೇ ಪ್ರಥಮ ಎನಿಸಿಕೊಂಡಿದ್ದು, ಇಂದು ಲೋಕಾರ್ಪಣೆಗೊಳ್ಳಲಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ತಿರುಪತಿ, ಶಿರಡಿ ಕ್ಷೇತ್ರಗಳ ಮಾದರಿಯಲ್ಲಿ ಆಕರ್ಷಕ ವಿನ್ಯಾಸದ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್ ಅನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಹಿಂಭಾಗದಲ್ಲಿ ಬರೋಬ್ಬರಿ 2ಲಕ್ಷ 75ಸಾವಿರ 177ಚದರಡಿ ವಿಸ್ತೀರ್ಣದ ಎರಡಂತಸ್ತಿನ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ.
ಶ್ರೀಸಾನ್ನಿಧ್ಯ ಎಂಬ ಕ್ಯೂ ಕಾಂಪ್ಲೆಕ್ಸ್ ಬಹಳಷ್ಟು ವಿಶಿಷ್ಟತೆಯಿಂದ ಕೂಡಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಲ್ಲದೆ ವಿಶಾಲವಾದ ಭವನದಲ್ಲಿ ಕುರ್ಚಿಯಲ್ಲಿ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು. ಎರಡಂತಸ್ತಿನಲ್ಲಿ ತಲಾ 8ರಂತೆ ಒಟ್ಟು 16 ವಿಶಾಲ ಭವನಗಳಿದ್ದು ಪ್ರತಿ ಭವನದಲ್ಲಿ 800 ಮಂದಿಯಂತೆ ಸುಮಾರು 12ಸಾವಿರ ಮಂದಿ ತಂಗಲು ಅವಕಾಶವಿದೆ. ಇಡೀ ಸಂಕೀರ್ಣ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.ಕ್ಯೂ ಕಾಂಪ್ಲೆಕ್ಸ್‌ಗೆ ಎಂಟ್ರಿಯಾಗುತ್ತಿದ್ದಂತೆ ಎ.ಐ ತಂತ್ರಜ್ಞಾನದ ಕ್ಯಾಮರಾ ಎಲ್ಲಾ ಭಕ್ತರ ಸಂಖ್ಯೆಗಳನ್ನು ಲೆಕ್ಕ ಹಾಕುತ್ತದೆ.
ಆರಂಭದಲ್ಲಿ ಸೇವಾ ರಶೀದಿ ಕೌಂಟರ್ ಇದ್ದು ಬಳಿಕ ಕೊಠಡಿಗೆ ಪ್ರವೇಶ ನೀಡಲಾಗುತ್ತದೆ. ಸುಂದರ ಕಲಾಕೃತಿಗಳಿಂದ ಆಕರ್ಷಿಸುವ ಈ ಕ್ಯೂ ಕಾಂಪ್ಲೆಕ್ಸ್ ನ ಪ್ರತೀ ಕೊಠಡಿಯೊಳಗೂ ಸುಸಜ್ಜಿತ ಆಸನಗಳು, ನೀರಿನ ವ್ಯವಸ್ಥೆ, ಶೌಚಾಲಯ, ಮಕ್ಕಳ ಆರೈಕೆ ಕೊಠಡಿ,ಟಿವಿ,ಉಚಿತ ಉಪಾಹಾರದ ವ್ಯವಸ್ಥೆ ಇರುತ್ತದೆ. ಇಡೀ ಕೊಠಡಿ 27 ಡಿಗ್ರಿ ಸೆಲ್ಸಿಯಸ್ ಕೂಲಿಂಗ್ ಸಿಸ್ಟಮ್ ನಿಂದ ಕೂಡಿದೆ.ಇಂತಹ ಸುಸಜ್ಜಿತ ಆಧುನಿಕ ತಂತ್ರಜ್ಞಾನ ಕ್ಯೂ ಕಾಂಪ್ಲೆಕ್ಸ್ ಬೇರೆಲ್ಲೂ ಇಲ್ಲ ಅನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಕ್ಯೂ ಕಾಂಪ್ಲೆಕ್ಸ್ಅನ್ನ ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಮಂಗಳವಾರ ಮಧ್ಯಾಹ್ನ ಲೋಕಾರ್ಪಣೆಸಲಿದ್ದಾರೆ. ಕೆಲವೇ ದಿನಗಳಲ್ಲಿ ಭಕ್ತರ ಉಪಯೋಗಕ್ಕೆ ದೊರಕಲಿದೆ.
PublicNext
07/01/2025 02:56 pm