ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಪ್ರಮುಖ - ಗಾಡ್ಗೀಳ್ ಮನವಿ

ಸ್ಥಳೀಯ ಜನರ ಅಭಿಪ್ರಾಯ ಹಾಗೂ ಅವರ ಸಹಕಾರದಿಂದ ಮಾತ್ರ ಅಪರೂಪದ ವನ್ಯಜೀವಿ ಸಂಕುಲವನ್ನು ಉಳಿಸಿಕೊಳ್ಳಲು ಸಾಧ್ಯ.  ಹೀಗಾಗಿ ಅಧಿಕಾರದ ವಿಕೇಂದ್ರೀಕರಣವಾಗಬೇಕು. ಪಶ್ಚಿಮ ಘಟ್ಟಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಲ್ಲಿನ ಸ್ಥಳೀಯ ಜನರು ಹಾಗೂ ಗ್ರಾಮ ಪಂಚಾಯಿತಿಗಳ ಅಭಿಪ್ರಾಯ ತಿಳಿಯಬೇಕು. ಜೊತೆಗೆ ಅಂತಿಮ  ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಅವರಿಗೆ ನೀಡಬೇಕು ಎಂದು ಗಾಡ್ಗೀಳ್ ತಿಳಿಸಿದ್ದಾರೆ.

ರಾಜ್ಯದ ಮೊದಲ ಕುಮಟಾ ಸಮೀಪದ ಹಳಕಾರ್ ಗ್ರಾಮಾರಣ್ಯ ಸಮಿತಿಗೆ ನೂರುವರ್ಷ ತುಂಬಿದ್ದು, ಈಚೆಗೆ ಶತಮಾನೋತ್ಸವ ಸಮಾರಂಭದ ತಾಂತ್ರಿಕ ಸಮಾಲೋಚನ ಸಭೆಯಲ್ಲಿ ಪಿಪಿಟಿ ಮೂಲಕ ಸಂದೇಶ ನೀಡಿದ್ದಾರೆ.

ಸ್ಥಳೀಯರಿಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಿದರೆ, ಸ್ಥಳೀಯವಾಗಿ ಪರಿಸರಕ್ಕೆ ಹಾಗೂ ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿಯಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು ಕರಾವಳಿ ಪರಿಸರದ ಅಧ್ಯಯನ ಕುರಿತು ವಿಷಯ ಹಂಚಿಕೊಂಡಿದ್ದಾರೆ.

ಗಾಡ್ಗೀಳ್ ಸಂಶೋಧನಾ ಸಂಗತಿ ಬಗ್ಗೆ ಡಾ.ಸುಭಾಷ್ ಚಂದ್ರ ವಿಚಾರ ಮಂಡಿಸಿದರು. ಶಿವಮೊಗ್ಗ ಜಿಲ್ಲೆಯ ವತಿಯಿಂದ ವೃಕ್ಷಲಕ್ಷ ಆಂದೋಲನದ ಪರವಾಗಿ ಶ್ರೀಪಾದ ಬಿಚ್ಚುಗತ್ತಿ ಭಾಗವಹಿಸಿ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಅವರ ಸಂದೇಶದ ಜೊತೆಗೆ ಆಂದೋಲನ ಇಲ್ಲಿಯವರೆಗಿನ ಸಾಮುದಾಯಿಕ ಪರಿಸರ ಸಂರಕ್ಷಣೆ ಕುರಿತ ವಿಷಯವನ್ನು ಹಂಚಿಕೊಂಡರು.

ವೈವಿಧ್ಯಮಯ ಸಮುದಾಯ ಅರಣ್ಯಗಳು ರಾಜ್ಯದಲ್ಲಿದ್ದು ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರಿನಿಂದ ಕರೆಸಿಕೊಳ್ಳುತ್ತವೆ.

1980ರ ದಶಕದಲ್ಲಿ ಸರ್ಕಾರ ಸಾಮಾಜಿಕ ಅರಣ್ಯ ಯೋಜನೆ ತರುವ ಸಂದರ್ಭದಲ್ಲೇ ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆ ಬಗ್ಗೆ ಪರಿಸರ ಸಂಘ-ಸಂಸ್ಥೆಗಳು ಆಗ್ರಹ ಮಾಡಿದ್ದವು.ಅದೇ ಹೊತ್ತಿಗೆ ಕೈಗಾರಿಕೆಗಳಿಗೆ ನೆಡುತೋಪು ಬೆಳೆಸಲು ಗ್ರಾಮ ಸಾಮೂಹಿಕ ಅರಣ್ಯ ಭೂಮಿ ನೀಡುವಾಗ ಮಲೆನಾಡಿನಲ್ಲಿ ಗ್ರಾಮ ಭೂಮಿ ಉಳಿಸಿ ಎಂಬ ಜನಾಂದೋಲನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

1987-88ರ ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯಲ್ಲಿ ಗ್ರಾಮ ಜನತೆ ಸಹಭಾಗಿತ್ವ ಮತ್ತು ಅರಣ್ಯ ಸಂರಕ್ಷಣೆ ವಿಷಯ ಮುನ್ನೆಲೆಗೆ ಬಂತು. 1985 ರಿಂದ 2005ರವರೆಗೆ ಶಿವಮೊಗ್ಗಾದಲ್ಲಿ ಎಂಪಿಎಂ ಕಾರ್ಖಾನೆಗೆ ಗ್ರಾಮ ಭೂಮಿ ನೀಡಬೇಡಿ ಎಂಬ ಹೋರಾಟ ನಡೆಯಿತು. 1990ರ ದಶಕದಲ್ಲಿ ಒಡಿಎ ಪಶ್ಚಿಮಘಟ್ಟ ಅರಣ್ಯ ಅಭಿವೃದ್ಧಿ ಯೋಜನೆ ಜಾರಿ ಮಾಡುವಾಗ ಎಲ್ಲೆಡೆ ಗ್ರಾಮ ಅರಣ್ಯ ಸಮಿತಿ ರಚನೆ

ಮಾಡಲೇಬೇಕು ಎಂದು ಹಕ್ಕೋತ್ತಾಯ ಮಾಡಿದ್ದಕ್ಕೆ ಯಶ ಸಿಕ್ಕಿತು. ದೇವರ ಕಾನು, ಕಾನು ಅಧ್ಯಯನಗಳು ನಡೆದವು. ಜೀವ ವೈವಿಧ್ಯ ದಾಖಲಾತಿ ಅಭಿಯಾನವನ್ನು ವಿಜ್ಞಾನಿಗಳ ಬೆಂಬಲ ಪಡೆದು 1999-2006 ರವರೆಗೆ ವೃಕ್ಷಲಕ್ಷ ಆಂದೋಲನದಿಂದ 40 ಹಳ್ಳಿಗಳಲ್ಲಿ ನಡೆಸಿರುವ ಕುರಿತು ಮಾಹಿತಿ ನೀಡಲಾಯಿತು.

21 ನೇ ಶತಮಾನದ ಆರಂಭದ 2 ದಶಕಗಳಲ್ಲಿ ಗ್ರಾಮ ಸಮುದಾಯ ಅರಣ್ಯಗಳ ಸಂರಕ್ಷಣೆಗೆ ವೃಕ್ಷಲಕ್ಷ ಆಂದೋಲನ ತೊಡಗಿಕೊಂಡಿತು. ಇದರ ಪರಿಣಾಮವಾಗಿ 120 ಹಳ್ಳಿಗಳಲ್ಲಿ (ಶಿವಮೊಗ್ಗ ಜಿಲ್ಲೆ) 20000 ಎಕರೆ ಗ್ರಾಮ ಸಮುದಾಯ ಅರಣ್ಯಗಳು, ಕಾನುಗಳ ರಕ್ಷಣೆ ಸಾಧ್ಯವಾಗಿದೆ ಎಂಬ ಹೆಮ್ಮೆ ನಮಗೆ ಇದೆ ಎಂದರು.

ಈಗ ಸರ್ಕಾರ ಕಾನು ರಕ್ಷಣಾ ಯೋಜನೆ ನಿಲ್ಲಿಸಿದ್ದು, ಪುನಃ ಈ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹ ಮಾಡಲಾಗಿದೆ. ಕರ್ನಾಟಕದ ಡೀಮ್ಡ ಅರಣ್ಯಗಳು 10 ಲಕ್ಷ ಹೆಕ್ಟೇರ್ ಎಂದು 10 ವರ್ಷ ಹಿಂದೆ ಸರ್ಕಾರದ ಆದೇಶ ವರದಿ ನೀಡಿತ್ತು. ಅದೀಗ ಬಹಳಷ್ಟು ನಾಶವಾಗಿದೆ. 3.30 ಲಕ್ಷ ಹೆಕ್ಟೇರ್ ಡೀಮ್ಡ ಅರಣ್ಯ ಉಳಿದುಕೊಂಡಿದೆ. ಈ ಡೀಮ್ಡ ಅರಣ್ಯಗಳು ಗ್ರಾಮ ಸಾಮೂಹಿಕ ಅರಣ್ಯ ಭೂಮಿಗಳಾಗಿವೆ ಎಂಬುದನ್ನು ಎತ್ತಿ ಹೇಳಬೇಕಿದೆ. ಡೀಮ್ಡ ಅರಣ್ಯ ಪಟ್ಟಿಯಿಂದ 173000 ಹೆಕ್ಟೇರ್ ಗ್ರಾಮ ಸಮುದಾಯ ಅರಣ್ಯಗಳನ್ನು 2023ರಲ್ಲಿ

ಕೈಬಿಡಲಾಗಿದೆ ಎಂಬ ಆಘಾತಕಾರಿ ಸಂಗತಿ ಮಲೆನಾಡಿನ ಜನತೆಗೆ ಗೊತ್ತೇ ಇಲ್ಲ. ಪುನಃ ಡೀಮ್ಡ ಪಟ್ಟಿಗೆ 173000 ಹೆಕ್ಟೇರ್ ಗ್ರಾಮ ಅರಣ್ಯಗಳ ಸೇರ‍್ಪಡೆ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. 20322 ರಲ್ಲಿ ಗ್ರಾಮ ಸಮುದಾಯ ಅರಣ್ಯ ಭೂಮಿಗಳನ್ನು, ಗೋಮಾಳಗಳನ್ನು ಲೀಸ್-ಗುತ್ತಿಗೆ ನೀಡಲು ಸರ್ಕಾರ ಆದೇಶ ಮಾಡಿತ್ತು. ಮಲೆನಾಡಿನ 4 ಜಿಲ್ಲೆಗಳಲ್ಲಿ ಸಭೆ-ಜಾಗೃತಿ ನಡೆಸಿದೆವು. ನಮ್ಮ ನಿಯೋಗ ಮುಖ್ಯಮಂತ್ರಿ ಭೇಟಿ ಮಾಡಿ ಈ ಆದೇಶ ರದ್ದು ಮಾಡುವಂತೆ ಒತ್ತಾಯಿಸಿತು.

2021 ರಿಂದ ಈ 3 ವರ್ಷಗಳಲ್ಲಿ ಗ್ರಾಮ ಪಂಚಾಯತ ಜೀವ ವೈವಿಧ್ಯ ಸಮೀತಿಗಳ ಮೂಲಕ ಗ್ರಾಮ ನೈಸರ್ಗಿಕ ಭೂಮಿ ನಿರ್ವಹಣೆ ಬಗ್ಗೆ ಮಲೆನಾಡಿನಲ್ಲಿ ನಡೆಸಿದ ಪ್ರಯೋಗಗಳು ಅನುಕರಣೀಯವಾಗಿವೆ. ಹೊನ್ನಾವರ ತಾ|| ಕಡ್ಲೆ ಗ್ರಾಮದ ಗ್ರಾಮ ಸಾಮೂಹಿಕ ಅರಣ್ಯದಲ್ಲಿ ಆಕೇಶಿಯಾ ನೆಡು ತೋಪು ಮಾಡಿದ್ದನ್ನು ಗ್ರಾಮ ಪಂಚಾಯತ ಮತ್ತು ರೈತರು ವಿರೋಧಿಸಿದರು. ಪುನಃ ಅದೇ ಸ್ಥಳದಲ್ಲಿ ಏಕಜಾತಿ ಗಿಡ ಕಿತ್ತು ಹಣ್ಣಿನ ಗಿಡ ನೆಡುವ ಅರಣ್ಯ ಇಲಾಖೆ ಕ್ರಮ ಜರುಗಿಸಿತು.

ಸ್ವಾತಂತ್ರ್ಯ ಪೂರ್ವದಿಂದಲೂ ಕಂದಾಯ ದಾಖಲಾತಿಗಳಲ್ಲಿ ಬೆಟ್ಟ ನಿಯಮಗಳು, ಸೌಲಭ್ಯಗಳು, ಇತಿಮಿತಿಗಳ ಬಗ್ಗೆ ಉಲ್ಲೇಖಗಳಿವೆ. ಬೆಟ್ಟ ಜಾಗೃತಿ ಅಭಿಯಾನ, ಬೆಟ್ಟ ಪ್ರಶಸ್ತಿ ನೀಡಿಕೆ, ಇವೆಲ್ಲ ನಾವು ನಡೆಸುತ್ತಿರುವ ಯಶಸ್ವಿ ಪ್ರಯೋಗಗಳಾಗಿವೆ. ಅದೇ ರೀತಿ 50000 ಹೆಕ್ಟೇರ ಬೆಟ್ಟ ಅರಣ್ಯವೂ ಉ.ಕ ಜಿಲ್ಲೆಯಲ್ಲಿ ಗ್ರಾಮಗಳ ರೈತರ ನಿರ್ವಹಣೆಯಲ್ಲಿದೆ. ಇದನ್ನು ಯುನೆಸ್ಕೋ ಗುರುತಿಸಿ ಇದು ಉತ್ತಮ ಕೃಷಿ ಪಾರಿಸಾರಿಕ ವ್ಯವಸ್ಥೆ ಎಂದು ಬಣ್ಣಿಸಿದೆ. ಗ್ರಾಮ ಪಂಚಾಯತ ಜೀವ ವೈವಿಧ್ಯ ಸಮಿತಿಗಳು ಸಕ್ರಿಯವಾಗಿ ಗ್ರಾಮ ಸಾಮೂಹಿಕ ನೈಸರ್ಗಿಕ ಭೂಮಿ ನಿರ್ವಹಣೆಗೆ ಮುಂದಾಗಬೇಕು ಎಂದು ಗ್ರಾಮ ಸಭೆಗಳು ಒತ್ತಾಯಿಸಬೇಕು. ನಮ್ಮ ಗ್ರಾಮದ ಕೆರೆ, ಅಳಿವೆ, ಹಳ್ಳ ಇವುಗಳ ನಿರ್ವಹಣೆ ಗ್ರಾಮ ಜನರ ಜವಾಬ್ದಾರಿ ಎಂಬುದನ್ನು ಅರಿಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಹಳಕಾರ್ ವಿಎಫ್ಎಸ್ಸಿ ಅಧ್ಯಕ್ಷ ಪದಾಧಿಕಾರಿಗಳು, ಗ್ರಾಮಸ್ಥರು. ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರನ್, ಡಾ.ಜಿ.ಆರ್.ರಾವ್, ಡಾ.ಪ್ರಕಾಶ್ ಮೇಸ್ತ, ಶಿವಾನಂದ ಕಳವೆ, ಅಖಿಲೇಶ್, ಇನ್ನೂ ಅನೇಕರು ಅನೇಕ ಪರಿಸರ ಸಂಗತಿಗಳ ಕುರಿತು ಅನುಭವ ಹಂಚಿಕೊಂಡರು.

Edited By : PublicNext Desk
Kshetra Samachara

Kshetra Samachara

01/01/2025 10:25 am

Cinque Terre

740

Cinque Terre

0

ಸಂಬಂಧಿತ ಸುದ್ದಿ