ಸಾಗರ : ವಿದ್ಯಾರ್ಥಿ ಜೀವನ ಅತ್ಯಂತ ಸುಂದರವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕಳೆದ ಸುಂದರ ಸಮಯವನ್ನು ಮೆಲಕು ಹಾಕುವ ಮೂಲಕ ನಮ್ಮ ಬಾಲ್ಯವನ್ನು ನೆನಪು ಮಾಡಿಕೊಳ್ಳುವುದು ಸತ್ಸಂಪ್ರದಾಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಸಚ್ಚಿದಾನಂದ ಮೂರ್ತಿ ತಿಳಿಸಿದರು.
ಇಲ್ಲಿನ ಎಚ್.ಶಿವಲಿಂಗಪ್ಪ ಪ್ರೌಢಶಾಲೆಯಲ್ಲಿ 1982-83ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಹಮ್ಮಿಕೊಳ್ಳಲಾಗಿದ್ದ ಮಹಾತ್ಮಾಗಾಂಧಿ ಪುತ್ಥಳಿ ಅನಾವರಣ, ಗುರುವಂದನಾ ಮತ್ತು ಅಪೂರ್ವ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾವು ಪಾಠ ಮಾಡಿದ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ಇನ್ನು ಕೆಲವರು ಸ್ಥಳೀಯವಾಗಿ ಬೇರೆಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ನಿವೃತ್ತರಾಗಿದ್ದೇವೆ. ಆದರೆ ನಾವು ಕಲಿಸಿದ ವಿದ್ಯಾರ್ಥಿಗಳು ಎದುರಿಗೆ ಸಿಕ್ಕಿ ನಮ್ಮನ್ನು ಗೌರವದಿಂದ ನೋಡಿದಾಗ ಅದಕ್ಕಿಂತ ಸಂತೋಷ ಬೇರೊಂದಿಲ್ಲ. 1982-83ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಇಂತಹ ಅಭೂತಪೂರ್ವ ಕಾರ್ಯಕ್ರಮ ಮಾಡುವ ಮೂಲಕ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳುತ್ತಿರುವುದು ಅನುಕರಣೀಯ ಎಂದರು.
ವಿದ್ಯಾರ್ಥಿಗಳು ನೀಡಿದ ಕಂಚಿನ ಗಾಂಧಿ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ರಾಷ್ಟ್ರೀಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಯು.ಜೆ.ಮಲ್ಲಿಕಾರ್ಜುನ, ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಅವರನ್ನು ಗೌರವಿಸುವುದು ಸಂತೋಷದ ಸಂಗತಿ. ಎಚ್.ಶಿವಲಿಂಗಪ್ಪ ಪ್ರೌಢಶಾಲೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಪ್ರಜ್ಞೆ ಜಾಗೃತಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರವಿಶಂಕರ್ ಡಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ವಿನಯ ದೇವರಾಜ್ ಪ್ರಾರ್ಥಿಸಿದರು. ಸುಬ್ರಹ್ಮಣ್ಯ ಸ್ವಾಗತಿಸಿದರು. ಶಿವಕುಮಾರ್ ವಂದಿಸಿದರು. ಎಸ್.ಪಿ.ದೇವರಾಜ್ ನಿರೂಪಿಸಿದರು. ನಂತರ ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು.
Kshetra Samachara
31/12/2024 02:45 pm