ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಪ್ರಕರಣ ನಿಜಕ್ಕೂ ಅಕ್ಷರಶಃ ಎಂತಹವರ ಕಣ್ಣಲ್ಲಿಯೂ ನೀರು ಬರುವಂತೆ ಮಾಡಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಆರು ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಸಾವಿಗೆ ಕಾರಣವಾದ ಸಾಯಿನಗರದ ಅಚ್ಚವ್ವನ ಕಾಲೋನಿಯ ಈಶ್ವರ ಗುಡಿ ಪಕ್ಕದ ದುರಂತ ನಡೆದ ಕಟ್ಟಡ ತೆರವುಗೊಳಿಸುವ ಚಿಂತನೆ ಜೋರಾಗಿಯೇ ನಡೆದಿದೆ.
ಸಿಲಿಂಡರ್ ಸ್ಫೋಟಗೊಂಡು ಒಂಬತ್ತು ಜನರು ತೀವ್ರವಾಗಿ ಗಾಯಗೊಂಡು ಈಗ ಆರು ಜನರು ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದುರಂತಕ್ಕೆ ಕಾರಣವಾಗಿದ್ದ ಕಟ್ಟಡವನ್ನು ತೆರವು ಮಾಡಲು ಚಿಂತನೆ ನಡೆಸಲಾಗಿದ್ದು, ಪಾಲಿಕೆಯ ಸಾಮಾನ್ಯ ಸಭೆಯ ಬಳಿಕವೇ ನಿರ್ಧಾರ ಹೊರಬೀಳಲಿದೆ. ಹೌದು…. ಆ ಕಟ್ಟಡಕ್ಕೆ ಪರ್ಯಾಯವಾಗಿ ಅದೇ ಕಾಲೋನಿಯಲ್ಲಿ ಸಮುದಾಯ ಭವನ ನಿರ್ಮಿಸಿ, ಅಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಸನ್ನಿಧಿ ಮಾಡಿಕೊಳ್ಳಲು ಅವಕಾಶ ಕೊಡುವ ಯೋಜನೆಯೂ ಸ್ಥಳೀಯರದ್ದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಸ್ಥಳೀಯ ಸದಸ್ಯ ರಾಜಣ್ಣ ಕೊರವಿ ಅವರು 60 ಲಕ್ಷ ವೆಚ್ಚದ ಸಮುದಾಯ ಭವನದ ಪ್ರಸ್ತಾವವನ್ನು ಪಾಲಿಕೆಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನೂ ಈಶ್ವರ ಗುಡಿ ತೆರವು ಮಾಡುವ ವಿಚಾರವಿಲ್ಲ. ದುರಂತ ನಡೆದ ಸ್ಥಳದ ಪಕ್ಕದಲ್ಲಿಯೇ ಸಭಾಭವನ ನಿರ್ಮಾಣ ಮಾಡಲಾಗುತ್ತದೆ. ಟೆಂಡರ್ ಪಾಸ್ ಆದ ತಕ್ಷಣವೇ ಸಭಾಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ದೇವರ ಮೂರ್ತಿ ಮರುಪ್ರತಿಷ್ಠಾಪನೆಗೆ ಹಾಗೂ ದುರಂತ ನಡೆದ ಕಟ್ಟಡ ತೆರವುಗೊಳಿಸಲು ಸ್ಥಳೀಯರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಾರ್ವಜನಿಕ ರಸ್ತೆ ಪಕ್ಕ ಅದು ಇರುವುದರಿಂದ, ಅಕ್ಕಪಕ್ಕದ ನಿವಾಸಿಗಳು ಸಹ ಈ ಹಿಂದೆಯೇ ತೆರವು ಮಾಡಲು ಬೇಡಿಕೆ ಇಟ್ಟಿದ್ದರು. ಸಮುದಾಯ ಭವನ ನಿರ್ಮಾಣದ ಕುರಿತು ಪ್ರಸ್ತಾವ ಸಲ್ಲಿಸಿದ್ದು, ಟೆಂಡರ್ ಆದ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ. ಅದೇ ವೇಳೆ ಕಟ್ಟಡ ತೆರವು ಮಾಡಲು ನಿರ್ಧರಿಸುತ್ತೇವೆ' ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾಹಿತಿ ನೀಡಿದ್ದಾರೆ.
Kshetra Samachara
30/12/2024 04:12 pm