ಹಾಸನ: ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ರಾಜ್ಯಸಭೆಯಲ್ಲಿ ಲಘುವಾಗಿ ಮಾತನಾಡಿ, ಅವಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಮುಂದುವರಿದು ಅವರನ್ನು ಕೇಂದ್ರ ಸಂಪುಟದಿಂದ ಕೈ ಬಿಡಬೇಕು ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಆಗ್ರಹಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಅಮಿತ್ ಶಾ ಅವರು ನಡೆದುಕೊಂಡಿದ್ದು ಖಂಡನೀಯ. ಅವರ ವಿರುದ್ಧ ಕ್ರಮ ಆಗದೇ ಇದ್ದರೆ ನಮ್ಮ ಪಕ್ಷದ ವತಿಯಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಗೃಹ ಸಚಿವರ ಅವಹೇಳನಕಾರಿ ನಡೆ ಖಂಡಿಸಿ ನಮ್ಮ ಪಕ್ಷದಿಂದ ಸಂಸತ್ ಎದುರು ಪ್ರತಿಭಟನೆ ನಡೆಸಿದ ವೇಳೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರನ್ನು ತಡೆಯುವ ಪ್ರಯತ್ತ ಸಹ ನಡೆಯಿತು. ಕೇಂದ್ರ ಸಚಿವರ ವರ್ತನೆ ಬಗ್ಗೆ ದೇಶವ್ಯಾಪಿ ತೀವ್ರ ಖಂಡನೆ ವ್ಯಕ್ತವಾಗಿದ್ದರೂ, ಪ್ರಧಾನಿ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಮಿತ್ ಶಾ ಅವರೂ ಪಶ್ಚತ್ತಾಪದ ವಿವರಣೆ ನೀಡದೇ ಇರುವುದು ದುರದೃಷ್ಟಕರ. ಇನ್ನಾದರೂ ಅವರಿಂದ ರಾಜೀನಾಮೆ ಪಡೆಯಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
PublicNext
24/12/2024 07:44 pm