ಮಂಡ್ಯ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನೊರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಮಗನ ಸಾವಿನ ಸುದ್ದಿ ಕೇಳಿದ ತಾಯಿ ಸಹ ಕುಸಿದುಬಿದ್ದು ಸಾವನ್ನಪ್ಪಿರುವ ದುರಂತ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ಜರುಗಿದೆ.
ಈ ಗ್ರಾಮದ ಲೇ. ಶಿವರಾಮು ಎಂಬುವರ ಮಗನಾದ 20 ವರ್ಷದ ಕೃಷ್ಣಮೂರ್ತಿ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದು ಶುಕ್ರವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣಮೂರ್ತಿ ತನ್ನ ಬೈಕ್‌ನಲ್ಲಿ ಸ್ನೇಹಿತನ ಜೊತೆ ತೆರಳುತ್ತಿದ್ದ ವೇಳೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಬೇಲಿಗೆ ನುಗ್ಗಿದೆ. ಬೇಲಿ ಮಧ್ಯದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ತಲೆಗೆ ತೀವ್ರ ಪೆಟ್ಟು ಬಿದ್ದು ಕಾಲಿನ ಮೂಳೆ ಸಹ ಮುರಿದಿದ್ದು ಗಂಭೀರ ಸ್ಥಿತಿಯಲ್ಲಿದ್ದ ಈತನಿಗೆ ಪಟ್ಟಣದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಮೃತಪಟ್ಟದ್ದಾನೆ. ಹಿಂಬದಿಯ ಸವಾರ ಶಿವಣ್ಣ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.
ಮಗನ ಸಾವಿನ ಸುದ್ದಿ ಕೇಳಿದ ಕೆಲವೇ ಕ್ಷಣದಲ್ಲಿ ಮೃತನ ತಾಯಿ 48 ವರ್ಷದ ಮಹಾದೇವಮ್ಮ ಸಹ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿನಲ್ಲೂ ಒಂದಾದ ತಾಯಿ ಮಗನನ್ನು ಇಂದು ಸಾಯಂಕಾಲ ಅಕ್ಕಪಕ್ಕದಲ್ಲೇ ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಿದ್ದಾರೆ.
PublicNext
23/12/2024 06:51 pm