ಬೆಳಗಾವಿ: ಹಿಂದೆಯೂ ಕೂಡ ಒಮ್ಮೆ ನಮ್ಮ ತಾಯಿ ಬಗ್ಗೆ ಮಾತಾಡಿದಾಗಲೂ ಬಿಜೆಪಿಯವರು ಸಮರ್ಥಿಸಿಕೊಂಡಿದ್ದರು. ಓರ್ವ ಮಹಿಳೆ ಬಗ್ಗೆ ಈ ರೀತಿ ಮಾತನಾಡಿದಾಗ ಅವರು ಖಂಡಿಸಬೇಕಿತ್ತು. ಆದರೆ, ಈಗ ಮತ್ತೆ ಮಾತನಾಡಿದಾಗಲೂ, ಅವರು ಅದನ್ನು ಸಮರ್ಥಿಸಿಕೊಂಡಿದ್ದು ದುರಾದೃಷ್ಟಕರ ಸಂಗತಿ. ಇದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರು ಸರ್ವ ಸಾಮಾನ್ಯ ಜನರಿಗೆ ಮಾದರಿ ಆಗಿರಬೇಕಿತ್ತು. ಆದರೆ, ನಮ್ಮ ತಾಯಿಗೆ ಅಷ್ಟೇ ಅಲ್ಲದೇ ಇಡೀ ಮಹಿಳಾ ಕುಲಕ್ಕೆ ಅವರು ಅಪಮಾನ ಮಾಡಿದ್ದಾರೆ. ಸಿ.ಟಿ.ರವಿ ಅವರು ಈ ರೀತಿ ಮಾತಾಡುತ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ. ಆದರೆ, ಅವರ ಮಾತಿನಿಂದ ಇವರ ಸಂಸ್ಕೃತಿ ಎಂಥದ್ದು ಅಂತಾ ಗೊತ್ತಾಗುತ್ತೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಕ್ಷೇತ್ರದ ಜನರು ಸ್ವ ಇಚ್ಛೆಯಿಂದ ಇಂದು ಸಿ.ಟಿ.ರವಿ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ನಮ್ಮ ಬೆಂಬಲಿಗರನ್ನು ನಾನು ಈಗಷ್ಟೇ ಭೇಟಿ ಮಾಡಿದ್ದೇನೆ ಎಂದರು.
ಘಟನೆಯಿಂದ ನಮ್ಮ ತಾಯಿಯವರ ಮನಸ್ಸಿಗೆ ತುಂಬಾ ಬೇಜಾರಾಗಿದೆ. ಯಾವುದೇ ಮಹಿಳೆಗೆ ಈ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ಬೇಜಾರು ಆಗುವುದು ಸಹಜ. ನಿನ್ನೆ ಎರಡು ಗಂಟೆ ನಮ್ಮ ತಾಯಿ ಜೊತೆಗೆ ಕುಳಿತು ಅವರಿಗೆ ಧೈರ್ಯ ಹೇಳಿದ್ದೇನೆ. ನಮ್ಮ ಇಡೀ ಕುಟುಂಬ ಅವರ ಬೆನ್ನಿಗೆ ನಿಂತಿದೆ. ಇಂಥ ಕಷ್ಟದ ಸಂದರ್ಭದಲ್ಲಿ ತಾಯಿ ಜೊತೆಗೆ ನಿಂತಿರುವ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.
ಮುಂದೆ ಪಕ್ಷದ ಮುಖಂಡರು, ಹಿರಿಯರ ಜೊತೆಗೆ ಚರ್ಚಿಸಿ ಯಾವ ರೀತಿ ಕಾನೂನು ಹೋರಾಟ ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.
PublicNext
21/12/2024 08:13 pm